s R.S.Venkataraju

R.S.Venkataraju

Saturday, October 28, 2006

ಇಲ್ಲಿರುವುದು ಸುಮ್ಮನೆ... ಅಲ್ಲಿರುವುದು ನಮ್ಮ ಮನೆ... ಬನ್ನಿ ನಮ್ಮ ಮನೆಗೊಮ್ಮೆ...!!!
ಹೊಸ ಚಿಗುರು ಹಳೆ ಬೇರು
ಕೂಡಿರಲು ಮರ ಸೊಬಗು...
-ಡಿ.ವಿ.ಗುಂಡಪ್ಪ


ಆರ್.ಎಸ್.ವೆಂಕಟರಾಜ್ ಅಂತರಜಾಲ ತಾಣಕ್ಕೆ ಸ್ವಾಗತ.

ನನ್ನ ಅಪರಾಧಗಳು

rsvenkataraju@gmail.com




Fonts problem? Right click the mouse, go to Encoding, select unicode(UTF-8)


ಸುವರ್ಣ ನ್ಯೂಸ್ 24x7 ನೇರಪ್ರಸಾರ











ಬೊಂಬಾಟ್ ಮನರಂಜನೆ:
ಕೆಳಗೆ ಅಂತರಜಾಲದ ಸಖತ್ ಮನರಂಜನೆ ಕೊಂಡಿಗಳ ಸಂಪರ್ಕವಿದೆ.
ತದಯಾಕೆ ಗುರೂ! ಮೌಸನ್ನು ಚಲಿಸಿ, ನಿಮಗಿಷ್ಟವಾದ ಸಂಗೀತಕ್ಕಾಗಿ ಕ್ಲಿಕ್ಕಿಸಿ.
24/7 ಇಂಚರ ರೇಡಿಯೋ
ದಾಸರ ಹಾಡುಗಳು
ಉಧ್ಬವ.ಕಾಂ
ಕನ್ನಡ ಗೀತೆಗಳು(ಆಲ್‌ಇಂಡಿಯಾಸೈಟ್‌.ಕಾಂ)
ಕನ್ನಡ ಆಡಿಯೋ.ಕಾಂ
ಸ್ಮಾಷ್‌ಹಿಟ್ಸ್‌.ಕಾಂ
ಹಮಾರ ಸಿಡಿ.ಕಾಂ
ಭಗವದ್ಗೀತೆ(ಇಂಡಿಯಾ ವಿಲಾಸ್‌.ಕಾಂ)
ವಿಷ್ಣುಸಹಸ್ರನಾಮ(ಇಂಡಿಯಾ ವಿಲಾಸ್‌.ಕಾಂ)
ಕನ್ನಡ ವೀಡಿಯೋ(ಯುಟ್ಯೂಬ್.ಕಾಂ)
ಕನ್ನಡ ವೀಡಿಯೋ
ಕನ್ನಡ ವೀಡಿಯೋ(ಕನ್ನಡ ಮ್ಯೂಸಿಕ್‌ವರ್ಲ್ಡ್.ಕಾಂ)
ವಿಶ್ವ ಕನ್ನಡ.ಕಾಂ
ದಿಶಾಂತ್‌.ಕಾಂ
ಮೈ ದೇಶೀಮ್ಯೂಸಿಕ್.ಕಾಂ
ವಾದ್ಯಸಂಗೀತ(ಇಂಡಿಯಾ ವಿಲಾಸ್‌.ಕಾಂ)
ಇಂಡಿಯಾ ವಿಲಾಸ್‌.ಕಾಂ
ಅಷ್ಟಲಕ್ಷ್ಮಿ ಸ್ತೋತ್ರ(ಇಂಡಿಯಾ ವಿಲಾಸ್‌.ಕಾಂ)
ವೆಂಕಟೇಶ್ವರ ಸುಪ್ರಭಾತ(ಇಂಡಿಯಾ ವಿಲಾಸ್‌.ಕಾಂ)
ಭಕ್ತಿ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ಜಾನಪದ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ರೀಮಿಕ್ಸ್‌ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ಪಾಪ್‌ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ದೇಶಭಕ್ತಿ ಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ಶಾಸ್ತ್ರೀಯ ಸಂಗೀತ(ಇಂಡಿಯಾ ವಿಲಾಸ್‌.ಕಾಂ)
ಭಾವಗೀತೆಗಳು(ಇಂಡಿಯಾ ವಿಲಾಸ್‌.ಕಾಂ)
ಚಲನಚಿತ್ರ ಧ್ವನಿವಾಹಿನಿಗಳು(ಇಂಡಿಯಾ ವಿಲಾಸ್‌.ಕಾಂ)
ನಾಟಕಗಳು(ಇಂಡಿಯಾ ವಿಲಾಸ್‌.ಕಾಂ)
ಹರಿಕಥೆಗಳು(ಇಂಡಿಯಾ ವಿಲಾಸ್‌.ಕಾಂ)
ಕನ್ನಡ ಮತ್ತು ವಿಶ್ವ ಚಲನಚಿತ್ರ ರಂಗ
ಕನ್ನಡ ಚಲನ ಚಿತ್ರ ವಿಮರ್ಶೆ
ಸದಭಿರುಚಿಯ ಕನ್ನಡ ಚಲನ ಚಿತ್ರಗಳು
ಸಿನಿಮಾ ಗರಂ ಸುದ್ದಿ
ಡಾ.ರಾಜ್
ಅವರ್‌ ಕರ್ನಾಟಕ.ಕಾಂ ಚಲನ ಚಿತ್ರ
ಕನ್ನಡ ರತ್ನ.ಕಾಂ ಚಲನ ಚಿತ್ರ
ವಿಗ್ಗಿ ಚಲನ ಚಿತ್ರ ಸುದ್ದಿ
ಚಿತ್ರರಂಗ.ಕಾಂ
ಅವರ್‌ ಕರ್ನಾಟಕ ಚಿತ್ರಗೀತೆಗಳು
ಕನ್ನಡ ಲಿರಿಕ್ಸ್‌.ಕಾಂ
ಸಾಹಿತ್ಯ ಪುಟ ಚಿತ್ರಗೀತೆಗಳು
ಕತ್ತಲೆ ಕೋಣಿಯಲ್ಲಿ ಕರಿಬೆಕ್ಕು ಹಿಡಿದವರ ಕತೆ

(ಸಣ್ಣ ಕತೆ)
-ಆರ್.ಎಸ್.ವೆಂಕಟರಾಜ್

The Hell is other people
- Jean Paul Sartre




ಹೀಗೆ:
ಪ್ರತಿ ದಿನ ಬಸ್ಸಿನಲ್ಲಿ ಅಥವಾ ಲೋಕಲ್ ಗಾಡಿಯಲ್ಲಿ ಸಂಚರಿಸುವ ಮುನ್ನ ನೀನು ಕೈಗೆತ್ತಿಕೊಳ್ಳುವ ಪತ್ರಿಕೆಯಲ್ಲಿ ಎಂಥ ಕತೆ ಬಯಸುತ್ತೀ ಎಂದು ನನಗೆ ಚೆನ್ನಾಗಿ ಗೊತ್ತಿದೆ.
ಪ್ರಿಯ ಓದುಗ:
ಆದರೆ ನಾನೀಗ ನಿಸ್ಸಹಾಯಕನಾಗಿದ್ದೇನೆ.ಕರುಣಾಜನಕ ಕತೆಗಳು; ಪ್ರೇಮ ಕತೆಗಳು ನಿನ್ನ ಕಣ್ಣಲ್ಲಿ ಬಿದ್ದು ನೋವಾಗಿ; ನಲಿವಾಗಿಬಿಡುವಂಥ ರಸ ಪ್ರಸಂಗಗಳನ್ನು ಬರೆಯಲು ನಾನು ತಕ್ಕ ವ್ಯಕ್ತಿಯಲ್ಲವೆಂಬುದು ನನಗೀಗಾಗಲೇ ನನ್ನ ವಿಫಲ ಕತೆಗಳಿಂದ ಗೊತ್ತಾಗಿದೆ. ಅಲ್ಲದೆ ನಕ್ಷತ್ರಗಳ ತಹಬಂದಿಯಾದ ಬದುಕಿನ ಕುರಿತು ಬರೆಯಲು ನನಗೆ ಯಾವ ಅಧಿಕಾರ ತಾನೆ ಇದೆ? ಆದರೂ ಕೆಲವೊಮ್ಮೆ ತಾವಂದುಕೊಳ್ಳದ ಅವಘಡಗಳು ನಡೆದು ಬಿಡುತ್ತವೆ.
ಪ್ರವೇಶ:
ಹೀಗಾದದ್ದರಿಂದಲೇ.... ಪರಶಿವನ ಭಕುತನೂ; ನ್ಯಾಯಾನ್ಯಾಯಗಳ ಪರಾಮರ್ಶಿಯೂ...ಸರ್ವಾಂಗ ಸುಂದರನೂ... ಛಪ್ಪನೈವತ್ತಾರು ದೇಶಗಳಲ್ಲಿ ವಿಖ್ಯಾತ ರಸಿಕನೂ ಆಗಿರತಕ್ಕಂಥಾ ಜಸಟೀಸ ಶ್ರೀಮನ್............ರಾಯರ ಕತೆಯೂ...ಆತನ ಕಿವಿಯೂ...ಕಿವಿಯೊಳಗಿನ ಫಳಗುಟ್ಟುವ ವಜ್ರದ ಬೆಂಡೋಲೆಯೂ...ಥರಾವರಿಯಾಗಿ ಬೆಳೆದದ್ದು; ಕತೆಯಾಗಿ ರೂಪಿತಗೊಂಡಿದೆ.
ನಕ್ಷತ್ರಗಳ ಅರಸುವ ಓದುಗರೂ; ಪ್ರೇಮ ಕಾವ್ಯದ ಅಖಂಡತೆಗೆ ಮಾರುಹೋಗುವ ಸುಗುಣವಂತರೂ... ಈ ಕತೆಯನ್ನು ಒಂದು ಪ್ರಸಂಗವಾಗಿಯೂ; ಜಸಟೀಸರ ದೇಹದ ಇಂಚಿಂಚನ್ನು ಸಂಕೇತವಾಗಿಯೂ ಪರಿಗ್ರಹಿಸಿ, ದಯಮಾಡಿ ಕೇಳಿ... ತಮ್ಮ ತಮ್ಮ ಅಭಿಪ್ರಾಯದ ಪ್ರಕಾರ ತಿಳಿದುಕೊಳ್ಳತಕ್ಕದಾಗಿ ; ಮತ್ತೆ ಈ ಕತೆಯಿಂದ ಯಾರಿಗಾದ್ರೂ ಬೇಸರವಾದರೆ... ಬೇಸರಬೇಡವೆಂದು ಸಹೃದಯ ವಾಚಕರಲ್ಲಿ ಈ ಕತೆಗಾರ ಬೇಡಿಕೊಳ್ಳುತ್ತಾನೆ.

ಯಥಾಪ್ರಕಾರವಾಗಿ, ಪರಶಿವನ ಭಕುತನಾದಂಥಹ ಜಸಟೀಸರ ಕತೆಯನ್ನು ಆರಂಭಿಸುವ ಮೊದಲು ಸದ್ಗುರು ವಿನಾಯಕನ ಪ್ರಾರ್ಥನೆಯಾದ--
ಶರಣೆಂಬೆ ಬೆನಕ
ನಿನಗೆ ಶರಣೆಂಬೆ....

ಈ ಥರನಾಗಿ ಪ್ರಾರ್ಥಿಸಿ, ವಿಘ್ನೇಶ್ವರನ ಆಶೀರ್ವಾದ ಪಡೆದು ಕತೆ ಮುಂದುವರೆಸಿ...ಜನ ಸಂತೋಷಕ್ಕೆ ಪಾತ್ರರಾಗಲು ಕಾರಣ ಇದೆ; ಏಕೆಂದರೆ ಅನಾಮಿಕನೂ..ಅರ್ಥಾತ್ ಸರ್ವವ್ಯಾಪಿಯೂ ಆದಂಥಾ...ಆ ಸೂತ್ರಧಾರಿಯ ಪಾತ್ರಧಾರಿಯಾಗಿ ಈ ಪರಸಂಗ ಹೇಳಲು; ಅಪ್ಪಟ ಸಾಕ್ಷಿ ನಾಪಿತ ನರಸಿಂಗ. ನಮ್ಮ ನರಸಿಂಗನಿಗೊಂದು ಕನಸು ಬಿದ್ದಿರಲಾಗಿ....ಆ ಕನಸಿನ ನಂತರವೇ ಪ್ರಸಂಗ ಬೆಳೆದಿದ್ದರಿಂದ ಮತ್ತು ಆ ಕನಸಿನಲ್ಲಿ ಮೂಗಿನ ವೃತ್ತಾಂತ ಕಾಣಿಸಿಕೊಂಡು ಚೌತಿ ಚಂದ್ರಮನ ಗ್ರಹಚಾರವೆಂಬಂತೆ ವಕ್ಕರಿಸಿದ್ದರಿಂದ ...ನಮಗಾರಿಗೂ ಆ ನಾಪಿತನ ಗ್ರಹಚಾರ ಬರದಿರಲೆಂಬ ಸದುದ್ದೇಶದಿಂದ-

ಶರಣೆಂಬೆ ಬೆನಕ
ನಿನಗೆ ಶರಣೆಂಬೆ....
ಶರಣೆಂಬೆ ಬೆನಕ
ನಿನಗೆ ಓ ಪಾರ್ವತೀಸುತನೆ....
ಒಂದು ಪುರಾತನ ದೃಶ್ಯ:
ಶೂರ್ಪನಕಿ ಕಿಟಾರನೆ ಕಿರಿಚಿದ್ದಾಳೆ; ಆಕೆಯ ಕೂಗಿಗೆ ಹಕ್ಕಿ ಪಿಕ್ಕಿಗಳು ಗಡಗಡನೆ ನಡುಗಿ ಪಟಪಟನೆ ರೆಕ್ಕೆ ಬಡಿದರೆ; ಮೋಹಿಸಿ ಲಕ್ಷ್ಮಣನನ್ನು ಪ್ರೇಮಪಾಶದಲ್ಲಿ ಬಂಧಿಸಲು ಬಂದವಳ ಹೃದಯ ಚೂರು ಚೂರಾಗಿ; ಏಕಪತ್ನೀವ್ರತನೂ... ಸುಗುಣವಂಥನೂ; ಪರಾಕ್ರಮಿಯೂ...ಸಹನಶೀಲನೂ; ಮಡಿವಾಳನ ಮಾತಿಗೆ ಕಿವಿಕೊಟ್ಟವನೂ ಆದಂತ ಶ್ರೀಮನ್ ರಾಮನ ಅನುಜನಾದಂತ ಲಕ್ಷ್ಮಣನಿಗೆ ತನ್ನ ಅತ್ತಿಗೆ ಸೀತಾಮಾತೆಯ ಅನುಗ್ರಹದ ಆಗ್ರಹವು ಶೂರ್ಪನಕಿಯ ಪಿರೀತಿಯಿಂದ ಎಚ್ಚರಿಸುವಂತೆ ಮಾಡಿಸಿ-
"ರಾಕ್ಷಸಿ ಶೂರ್ಪನಖಿ ...ನನ್ನ ಬ್ರಹ್ಮಚರ್ಯಕ್ಕೆ ಸವಾಲೆ.." ಇತ್ಯಾದಿ ಮಾತುಗಳನ್ನು ಆಡುತ್ತಾ ಬಾಣದ ತುದಿಯಿಂದ ಶೂರ್ಪನಕಿಯ ಮೂಗನ್ನು ಪರಕ್ಕನೆ ಕೋಳಿ ಕತ್ತಿನಂತೆ ಕತ್ತರಿಸಿದಾಗ; ಮೂಗು ನೆಲಕ್ಕೆ ಬಿದ್ದು ಒದ್ದಾಡಿದೆ. "ಅಣ್ಣಾ ... ರಾವಣ...ದಶಕಂಠಾ..." ಎಂದು ಕೂಗುತ್ತಾ ಆಕೆಯ ಮನವೂ...ತನುವೂ...ಬೆಂಕಿಯಂತೆ ಸುಡುತ್ತಾ ಆಕಾಶದ ಮೈದಾನ ಹೊಕ್ಕಿದೆ. ರಕ್ತ ಬಳಬಳನೆ ಸುರಿದಿದೆ."ಮೂಗಿಲ್ಲದೇ ಹೇಗೆ ಬದುಕಲಿ? ಯಾರನ್ನು ಲಗ್ನವಾಗಲಿ? ಇನ್ನು ತನ್ನ ಆಸೆ ಆಕಾಂಕ್ಷೆಗಳ ಪಾಡೇನು.." ಎನ್ನತ್ತಾ ಶೂರ್ಪನಕಿ ಅತ್ತಿದ್ದಾಳೆ; ಅಳುತ್ತಲೇ ಅಣ್ಣನ ಬಳಿಗೆ ಓಡಿ " ಅಣ್ಣಾ...ಅಣ್ಣಾss.." ಎನ್ನುತ್ತಿದಂತೆ, ಶೂರ್ಪನಕಿಯ ಭಯಂಕರ ಮೊಗ ಕಂಡು ನರಸಿಂಗನೆಂಬೊ ನಾಪಿತನು ನಾನಾ ನಿಮಿತ್ತವಾಗಿ ಗಡಗಡನೆ ನಡುಗಿ ರಾತ್ರಿ ಮಲಗಿದ್ದ ಈಚಲು ಚಾಪೆಯನ್ನು ತೆಳ್ಳಗೆ ಒದ್ದೆ ಮಾಡಿದನು.

ಇಲ್ಲಿಗೆ ಕನಸಿನ ಪ್ರಸಂಗವು ಮುಗಿದು ಆಮೇಲೆ ಏನಾಯಿತೆಂದರೆ-
ಕೈಗೂ ಬಾಯಿಗೂ ಘೋರ ಯುದ್ಧ:
ತಿಳಿಗೆಂಪ ಬಣ್ಣದ ಬೆಳಗಿನ ಸೊಂಪಲ್ಲಿ; ಇಬ್ಬನಿಯ ಕೊರೆತದ ಒಂಚೂರು ತಂಪಲ್ಲಿ; ಗುಡ್ಲ ಒಲೆಯಲ್ಲಿ ಹಸಿ ಪುಳ್ಳೆ ಧಗಧಗನೆ ಉರಿಯದೆ...ಹೊಗೆ ಮೇಲೇರಿ ಕಾವಳದ ಜೊತೆ ತೋಳ್ತೆಕ್ಕೆಯಲ್ಲಿ ಬಂಧಿಯಾಗಿರಲು;ಹೆಣ್ಣೆಂಬ ಹೆಂಗಸದಿಟ್ಟಧೀಮಂತೆಯೂ...ನಮ್ಮ ನರಸಿಂಗನ ಹೆಂಡತಿಯೂ....ಬಿಸ್ತರನ ಹಳ್ಳಿ ಕಾಳಪ್ಪನ ಕಿರಿಮಗಳೂ...ಲಾಗಾಯ್ತಿನಿಂದಲೂ ಗಂಡನಿಗೆ ಗುಲಗಂಜಿ ತೂಕದಷ್ಟೂ ಮರ್ವಾದೆ ಕೊಡದ ಜಾಯಮಾನದವಳೂ ಆದಂಥಾ ಕರಿನಿಂಗವ್ವನೆಂಬುವಳು "ಎದ್ದೇಳು ಮೂದೇವಿ" ಎಂದು ನರಸಿಂಗನ ಮೂತಿಗೆ ತಿವಿದು ವಕ್ರವಕ್ರವಾಗಿ ಮೊಗ ಸಿಂಡರಿಸಿದಾಗ; ಕನಸಿನ ಶೂರ್ಪನಕಿಯೇ ಸಾಕ್ಷಾತ್ ಬಂದಂತಾಗಿ ನರಸಿಂಗನ ಮೈಎಲ್ಲಾ "ಜುಂ" ಎನ್ನಲು; ಹಾಗೆಯೇ ಎದ್ದು ಕೂತಾಗ ಗಮಲು ಗುಡುವ ಕೋಳಿ ಎಸರು ಮೂಗಿಗೆ ಬಡಿದು ಕೊಂಚ ಮೈ ಸಡಲಿಸಿ ಆಕಳಿಸಿದಾಗ; ಮತ್ತೆ ಅವನ ನಿದ್ದೆಗಣ್ಣ ಮುಂದೆ ಮೂಗುಗಳು ಬರತೊಡಗಿದವು. ಶೂರ್ಪನಕಿಯ ಮೊಂಡು ಮೂಗಿನ ಮಗ್ಗುಲಲ್ಲಿ ಹೆಂಡತಿಯ ಬುಗುರಿ ಮೂಗು ಬಂದು ಯಥಾಪ್ರಕಾರವಾಗಿ ಸೊಟ್ಟ ಸೊಟ್ಟದಾಗಿ ನರ್ತಿಸಲು...ಲಕ್ಷ್ಮಣನ ಮೇಲೆ ನರಸಿಂಗನಿಗೆ ಭಾರಿ ಕೋಪ ಬರುತ್ತಿರಲು; ಕರಿನಿಂಗಿ ಮತ್ತೊಮ್ಮೆ ಕೂಗಿದ್ದು ಕೇಳಿಸಲು;ಬೊಕ್ಕಣದಿಂದ ಕೊರೆ ಬೀಡಿ ತೆಗೆದು; ಒಲೆಯ ಉರಿವ ಪುಳ್ಳೆಯಿಂದ ಮುಟ್ಟಿಸಿ ದಂ ಎಳೆದು; ಮಜ್ಜಿಸಲು ಹೊಂಟನು.
ಮೊಗ ತೊಳೆದು ವಲ್ಲಿ ಕೊಡವಿ; ನಿಗಿ ನಿಗಿ ಕೆಂಡದ ಒಲೆಯ ಪಕ್ಕ ಕುಕ್ಕರಗಾಲಲ್ಲಿ ಕೂತ ನರಸಿಂಗನಿಗೆ ರಾತ್ರಿಯ ಕನಸೇ ಮುಂದೆ ಮಗದೊಮ್ಮೆ ನಿಂತಂತಾಗಿ; ಹೆಂಡತಿಯ ಮೊಗವನ್ನೇ ದುರುಗುಟ್ಟಿ ನೋಡಲು, ಅದನ್ನು ಬೇರೆ ರೀತಿ ಅರ್ಥೈಸಿಕೊಡ ಕರಿನಿಂಗಿ ಸಿಲಾವರ ತಟ್ಟೆಯಲ್ಲಿ ಹಬೆ ಏಳುತ್ತಿದ್ದ ರಾಗಿ ಹಸಿಟ್ಟಿನ ಮುದ್ದೆ; ಕೋಳಿ ಎಸರಿನ ಹೋಳುಗಳನ್ನು ಗಂಡನ ಮುಂದೆ ಕುಕ್ಕಲಾಗಿ; ಆತನು ಕೈಗೂ ಬಾಯಿಗೂ ಘೋರ ಯುದ್ಧವನ್ನು ಪ್ರಾರಂಭಿಸದಾಗ; ಏನಾಯ್ತಪ್ಪ ಅಂತಂದರೆ-
ಬಸಕ್ಕನ ಕೋಳಿ:
ಕೆಳಗಿನ ಕೇರಿಯ ಬಸಕ್ಕ ದನಿ ಏರಿಸಿ ರಾಗವಾಗಿ ಅಳುತ್ತಾ " ಅಯ್ಯೋ... ನನ್ನಾಟಗಳ್ಳಾ...ನಿನ್ನ ವಂಶ ನಿರ್ವಂಶ ಆಗಾ... ಬೇಗೂರು ಸಂತ್ಯಾಗ ತಂದ ಬಂಗಾರದಂತಾ ಕೋಳೀನ ಕದ್ರಲ್ಲೋ..." ಎಂದು ಬೈದ ಬೈಗಳನ್ನು ಮತ್ತೆ ಬೈಯದೆ; ತನ್ನ ಬೈಗಳ ನಿಘಂಟನ್ನು ಬಿಚ್ಚುತ್ತಾ; ಲಬ ಲಬಾ ಬಾಯಿ ಬಡಿದುಕೊಳ್ಳುತ್ತಾ; ಕೂಡು ರಸ್ತೆಯಲ್ಲಿ ಮೂರು ಹಿಡಿ ಮಣ್ಣನ್ನು ತಲೆ ಮೇಲಿಂದಾ ಬೆನ್ನ ಹಿಂದೆ ಎರಚಿ" ನಿನ್ನ ವಂಶ ನಿರ್ವಂಶ ಆಗಾ... ನನ್ನ ಕೋಳೀನ ಬೇಯ್ಸಿತಿಂದೋರ ಬಾಯಿಗೆ ನನ್ನ ಮಿಂಡನ ಹೇಲ್ಹಾಕಾ..." ಎಂದು ಲಟಲಟನೆ ಲಟಿಗೆ ಮುರಿದು; ತನ್ನ ಗುಡ್ಲಿಗೆ ಹೊರಟಿರಲಾಗಿ; ಕೋಳಿ ಬಾಡನ್ನು ಬಾಯಲ್ಲಿ ಇಟ್ಟ ನರಸಿಂಗನು "ಹೊಯಿಕ್... ಹೊಯಿಕ್" ಎಂದು ತುಂಡನ್ನು ಹೊರಗೆ ಉಗಿಳಿದನು.
'ಬಸಕ್ಕನ ಕೋಳಿ ಎಂದಿದ್ದರೆ ದೇವ್ರಾಣಿಗೂ ಕದೀತಿರಲಿಲ್ಲ. ಬಸಕ್ಕನ ಬಾಯಲ್ಲಿ ಬೀಳೋದೂ ಒಂದೇ; ಹಾಳು ಭಾವೀಲಿ ಬೀಳೋದೂ ಒಂದೇ.ಜಲ್ಮ ಜಾಲಾಡಿಸಿ ಏಳು ತಲೆಮಾರಿನವರನ್ನೂ ಎಳೆದು; ಮಾನ ಮರ್ವಾದೆ ಮೂರು ಕಾಸಿಗೆ ಹರಾಜಾಕಿ; ಎಕ್ಕಡದಲ್ಲಿ ಬಾಚಿ, ಚಕ್ಕಡೀಲಿ ಹಾಕ್ತಾಳೆ ಭೋಸುಡಿ ಇವಳ ಗುಡಾಣ ಮೊಲೆಯ ಆಸೆಗೆ; ಪೇಟೆಯ ಗಂಡು ಅನ್ನಿಸಿಕೊಂಡ ಇಸಮುಗಳೆಲ್ಲಾ ಒಂದಲ್ಲಾ ಒಂದು ಇರುಳು; ಅವಳ ಗುಡ್ಲಿಗೆ ನುಗ್ಗಿದವರೇ...' ಎಂದೆಲ್ಲಾ ಯೋಚನೆಗೈಯುತ್ತಿದ್ದ ನರಸಿಂಗನಿಗೆ ಶೂರ್ಪನಕಿಯ ಮೊಂಡು ಮೂಗು; ಕರಿನಿಂಗಿಯ ಬುಗರಿ ಮೂಗಿನ ಜೊತೆ ಬಸಕ್ಕನ ಕೋಳೀ ಮೂಗೂ ಸೇರಿ ವಿಚಿತ್ರವಾಗಿ ತಾಂಡವ ನೃತ್ಯವಾಡುತ್ತಿರಲು; ಕೊನೆಗೆಲ್ಲಾ ಮಂಕಾಗಲಾಗಿ...... ಸಂಜೆ ಕತ್ತಲಲ್ಲಿ; ಬೇಲಿ ಸಂದೀಲಿ ಕೋಳಿ ಕೊಕ್...ಕೊಕ್...ಕ್ಕೊ.. ಅಂಬಲಾಗಿ; ನರಸಿಂಗನ ಬಾಯಲ್ಲಿ ನೀರೂರಲಾಗಿ; ಬಟ್ಟೆ ಪಿನ್ನನ್ನು ದಾರಕ್ಕೆ ಕಟ್ಟಿ ಗಾಳದ ಕೊಕ್ಕೆಯಂತೆ ಮಾಡಿ; ಈರುಳ್ಳಿ ಸಿಗಿಸಿ ಕೋಳಿ ಹತ್ತಿರ ಎಸೆಯಲಾಗಿ; ಕೋಳಿ ಈರುಳ್ಳಿ ನುಂಗಲಾಗಿ; ಬಟ್ಟೆ ಪಿನ್ನು ಕೋಳಿ ಹೊಟ್ಟೆಯಲ್ಲಿ ಗಾಳದಂತೆ ಸಿಕ್ಕಿ ಹಾಕಿಕೊಳ್ಳಲಾಗಿ; ಕೋಳಿ ಕೊಕ್ ಎನ್ನಲೂ ಆಗದೇ ಇರಲಾಗಿ; ನರಸಿಂಗನೆಂಬೋ ನಾಪಿತನು ಗೋಣೀ ಚೀಲದಲ್ಲಿ ಕೋಳಿ ಹಿಡಿದು; ಪುಕ್ಕ ತರೆದನು.ಇಲ್ಲಿಗೆ ಬಸಕ್ಕನ ಕೋಳಿ ಪ್ರಸ್ತಾಪವು ಸಮಾಪ್ತಿಯಾಯಿತು.
ಕರಿನಿಂಗಿ ಬಸರಿ:
ಇತ್ತ ಕಡೆ ನರಸಿಂಗ ತನ್ನದೇ ಆದಂತಹ ಅನುಭವವನ್ನು ಮರುಕಳಿಸಿಕೊಳ್ಳುತ್ತಿದ್ದಾಗ; ಅತ್ತ ಕಡೆ ದಿಟ್ಟಧೀಮಂತೆ ಬಿಸ್ತರನಹಳ್ಳಿ ಕಾಳಪ್ಪನ ಕಿರಿಮಗಳಾದಂತಹ ಕರಿನಿಂಗವ್ವ ಸೌಟಿನ ಮೇಲೆ ಸೌಟು ಕೋಳೀ ಬಾಡನ್ನು ಧ್ವಂಸ ಮಾಡುತ್ತಿರಲು; ಕಿಟಾರನೆ ಕಿರುಚಿ "ಅಯ್ಯೋ ಬೇವರ್ಶಿ... ಮೂದೇವಿ ನಿಂಗೇನು ಓಗೋ ಕಾಲ ಬಂತೋ..." ಇನ್ನೂ ಮುಂತಾಗಿ ಬೈಯಲು ಬಾಯಿ ತೆರೆದಾಗ... ಬಾಯಿಂದಾ ಬೈಗಳು ಬರದೇ ಕುಡಿದ ಹುಳಿ ಹೆಂಡ; ನುಜ್ಜು ಗೊಜ್ಜಾದ ಕೋಳೀ ಬಾಡು ವಾಂತಿಯಾಗಿ 'ಹೊಯಿಕ್...ಹೋ..ಇಕ್' ಹೊರಬಂದು ಸಗಣಿ ಸಾರಿಸದ ನೆಲದ ಮೇಲೆ ಸಿಂಪಡಿಸಿದಾಗ; ಗುಡ್ಲ ತುಂಬೆಲ್ಲಾ ಗಬ್ಬು ವಾಸನೆ ತುಂಬಿತು.
ಮೊದಲೇ ಬಸಕ್ಕನ ಬೈಗಳಿಂದ ಚೇತರಿಸಿಕೊಳ್ಳುತ್ತಿದ್ದ ನರಸಿಂಗ; ಕರಿನಿಂಗಿಯ ಬೈಗಳಿಂದ ತತ್ತರಿಸಿದನು. ಜಿಡ್ಡುಗಟ್ಟಿದ ಅವನ ಮೊಗದಲ್ಲಿ ಕಿರುನಗೆಯೊಂದು ಒಂದು ಚಣ ಲಾಸ್ಯವಾಗಿ ಮಾಯವಾಯಿತು. " ಕರಿನಿಂಗಿ ಬಸರಿ; ಇಲ್ದಿದ್ರೆ ವಾಂತಿಯಾಕೆ ಮಾಡ್ತಿದ್ಲು! ಸರಿ ವಾಂತಿ ಮಾಡಿದಳು, ಆದ್ರೆ ತನ್ನನ್ಯಾಕೆ ಬೈಯಬೇಕು? ಭೋಸುಡಿ. ಸರಿ ಬೈದಳು! ವಾಂತಿಯಾಕೆ ಮಾಡಬೇಕು ? ಭೋಸುಡಿ....." ಎಂಬ ತರ್ಕ ವಿತರ್ಕವಾದದಲ್ಲಿ ತೊಡಗಿ ಬಾಯಿತೆರೆದು ಗೊಂದಲದಲ್ಲಿ ಬಿದ್ದಾಗ; ಏನಾಯ್ತಪ್ಪ ಅಂತಂದರೆ-
ಲಕ್ಷ್ಮಣ ಸ್ವಾಮಿಯ ಆದರ್ಶ:
ನರಸಿಂಗನ ಮೊಗದ ಮುಂದೆ ಮನುಷ್ಯರ ಬೆಂದ ಕಿವಿಯೊಂದನ್ನು ಹಿಡಿದ ಕರಿನಿಂಗಿ ಉಗ್ರವಾಗಿದ್ದಳು.
ಕೋಳಿ ಗುಂಡಿಗೆಯೆಂದು ಕರಿನಿಂಗವ್ವ ಜಗಿದಿದ್ದು; ಕೋಳಿ ಗುಂಡಿಗೆಯಾಗಿರದೇ; ಮನುಷ್ಯನ ಕಿವಿಯಾಗಿದ್ದು...! ಯಮಕೆ ಎಂದು ಕಡಿದದ್ದು ಯಮಕೆಯಾಗಿರದೇ; ಆ ಕಿವಿಯಲ್ಲಿದ್ದ ವಜ್ರದ ಬೆಂಡೋಲೆ ಆಗಿದದ್ದೇ...! ಈ ಎಲ್ಲಾ ರಾದ್ದಾಂತಕ್ಕೆ ಕಾರಣವಾಯಿತೆಂದು ಬೆಸಗೊಂಡವರು ಆಲಿಸಬೇಕೆಂದು ಪ್ರಾರ್ಥನೆ.
"ಅಯ್ಯೋ... ನಿನ್ನ ಮನೆ ಹಾಳಾಗಿ ಹಾಳವಾಣ ಬಿತ್ತಾ... ನಿಂಗೇನು ಓಗೋ ಕಾಲ ಬಂತೋ ಮುಕ್ಕಾ... ನಿಂಗಷ್ಟು ದೇಸ ಇದ್ರೆ... ನನ್ನೇ ಕೊಂದಾಕ ಬೇಕಿತ್ತು. ಬಂಗಾರದಂತಾ ಜಸಟೀಸ ಸೋಮಿಗಳ ಕಿವಿ ತರಕೊಂಡು ಬಂದು ಬಾಡ್ನಾಗಾಕಿ ನಂಗೇ ತಿನ್ನಿಸ್ತೀಯಾ... ಭಾಡಿಯಾ...ನೆನ್ನೆ ಸಂಜಿನಾಗೆ ಅವರ ಮನೆ ಕೆಲಸಕ್ಕೆ ಹೋದಾಗ; ಮಾರಾಜರಂಗೆ ಕುದುರೆ ಸಾರೋಟು ಇಳಿದು ಬಂದವರೇ; ಕಾಲೊತ್ತುಬಾರೇ ನಿಂಗೀ...” ಅಂದಿದ್ದರಲ್ಲಾ ಸೋಮಿಗಳು; " ಏಸು ಚಂದಾ ಅದೀಯಲ್ಲೇ ನಿಂಗೀ....ಅಂತಿದ್ದರಲ್ಲಾ ಸೋಮಿಗಳು....."ಎಂದು ರಾಗವಾಗಿ ಅಳುತ್ತಾ ಕರಿನಿಂಗವ್ವ ನರಸಿಂಗನ ಮೋರೆಗೆ ತಿವಿಯಲು, ಜಂಘಾಬಲ ಉಡುಗಿ; ಈ ಪರಪಂಚದೊಳಗೆ ಬಂದ ನರಸಿಂಗ; ಕಿವಿಯನ್ನೋಮ್ಮೆ ಕೈಯಲ್ಲಿ ಹಿಡಿದು ಸೂಕ್ಷ್ಮವಾಗಿ ಪರೀಕ್ಷಿಸಿದ. ಕಿವಿ ಬೆಂದಿದ್ದರಿಂದ ಕೊಂಚ ಊದಿಕೊಂಡಿತ್ತು. ಕೆಳಗಿವಿಯ ಹತ್ತಿರ ಕರಿನಿಂಗಿಯ ಎಮ್ಮೆಯಂತಹ ಹಲ್ಲುಗಳ ಗುರುತು ಕಾಣಿಸುತ್ತಿತ್ತು. ಕಿವಿಯ ಮೇಲು ಭಾಗದಲ್ಲಿ ಯಾರದೋ ಹಲ್ಲುಗಳ ಗುರುತು ಆಳವಾಗಿ ಇಳಿದಿದ್ದವು. ಇಷ್ಟಾದರೂ ಬೆಂಡೋಲೆಯ ವಜ್ರವಂತೂ ಪಳ ಪಳನೆ ಪಳಗುಟ್ಟುತ್ತಾ ಕಿವಿಯ ನಿಗೂಢತೆಯನ್ನು ಕಾಪಾಡುತ್ತಿತ್ತು.
ಬೆಳಗಿನ ಸೂರ್ಯ ಪರಪಂಚದ ಕಾವುಗಳಿಗೆ ಕಾದು ಕಾವಲಿಯಂತೆ ಕೆಂಪಾಗಿ, ಕಾವಳದ ಮುಸಕನ್ನು ಮರೆಯಾಗಿಸಿ ದೊಡ್ಡಿಯಲ್ಲಿದ್ದ ಕೆಂಪುದಾಸವಾಳದ ದಳಗಳನ್ನು ಮತ್ತಷ್ಟು ಕೆಂಪಾಗಿಸಿದ್ದ. ಬೇಲಿಯಲ್ಲಿ ಮರೆಯಾಗುತ್ತಿದ್ದ ಕರಿನಾಗರನ ಮೇಲೆ ಸೂರ್ಯಕಿರಣ ಬಿದ್ದು ಮಿರಿಮಿರಿ ಮಿಂಚುತ್ತಿತ್ತು. ಗಾಳಿ ಬೀಸಿದ ಕಡೆ ಕರನಿಂಗಿಯ ರಾಗದ ಅಳುವಿನ ದನಿ ಅಲೆ ಅಲೆಯಾಗಿ ಪಸರಿಸಿ ಅಕ್ಕಪಕ್ಕದ ಗುಡ್ಲ ಜನರ ಪ್ರಜ್ಞಾವಲಯದ ನೇಮಿಯಲ್ಲಿ ಸುಳಿದಿಣಿಕಿ ಮಾಯವಾಗುತ್ತಿತ್ತು.
ನರಸಿಂಗನಿಗಂತೂ ತಲೆಬುಡ ಒಂದೂ ಗೊತ್ತಾಗದೆ ವಿಲಿ ವಿಲಿ ಒದ್ದಾಡಿದ. ಮುಂಬರುವ ಅನಾಹುತಗಳು ದುತ್ ಎಂದು ಎದ್ದು ನಿಂತಿದ್ದರಿಂದ ಹೆದರಿ ಅವನು; ಲಕ್ಷ್ಮಣ ಸ್ವಾಮಿಯನ್ನು ಆದರ್ಶ ಪುರಷನಾಗಿ ಕಂಡು ಕಸುಬಿನ ಡಬ್ಬಿಯಿಂದ ಮೊಗ ಚೌರದ ಕತ್ತಿ ತೆಗೆದು "ಭೋಸುಡಿ...ಅತ್ತು ಕರೆದು ರಂಪ ಮಾಡಿ ನಾಕು ಜನರಿಗೆ ಗೊತ್ತಾದರೆ ನಿನ್ನ ಬುಗುರಿ ಮೂಗು ತರೆದು ಬಿಡುತ್ತೇನೆ" ಎಂದಾಗ. ಜೀವಮಾನದಲ್ಲಿ ಪ್ರಥಮ ಬಾರಿಗೆ ಗಂಡನಲ್ಲಿ ಗಂಡಸುತನ ಕಂಡ ಕರಿನಿಂಗಿಯು ಜಸಟೀಸ ಸೋಮಿಗಳ ಬೆಂದ ಕಿವಿಯನ್ನು ಅದರಲ್ಲಿ ಫಳಗುಡುವ ವಜ್ರದ ಬೆಂಡೋಲೆಯನೊಮ್ಮೆ ನೋಡಿ ಏನು ತಿಳಿದಳೋ ತೆಪ್ಪಗಾದಳು.
ತೊರೆ ಚರಂಡಿಯಾದ ಪರಿಯು:
ಕಾರ್ಯೋನ್ಮುಖನಾದ ನರಸಿಂಗನು ಕಸುಬಿನ ಡಬ್ಬಿಯಲ್ಲಿದ್ದ ಮೊಗ ಚೌರ ಮಾಡಿ ಸೀಟಲು ಇಟ್ಟಿದ್ದ ಕಾಜಗದಲ್ಲಿ ಕಿವಿಯನ್ನು ಸುತ್ತಿ ;ದೊಡ್ಡ ಚರಂಡಿಯ ಕಡೆ ಬಿಜಂಗೈಸಿದನು.
ಹಿಂದೆ... ಬಹು ಹಿಂದೆ; ಈ ದೊಡ್ಡ ಚರಂಡಿಯು ತೊರೆಯಾಗಿ ತಿಳಿ ನೀರೇ ಹರಿಯುತ್ತಿತ್ತು. ಅಷ್ಟೇಕೆ ಮಾರಮ್ಮನ ಜಾತ್ರೆಯಲ್ಲಿ ಗಂಗೆಪೂಜೆಗೆ ಇಲ್ಲಗೇ ಬರುತ್ತಿದ್ದೆವೆಂದು ಹಟ್ಟಿಯ ಅಜ್ಜಿಗಳು ಇಂದಿಗೂ ಹೇಳುತ್ತಾರೆ. ಆದರೆ ಪೇಟೆಯ ಕೊಳಚೆ ನೀರೆಲ್ಲಾ ಈ ತೊರೆಗೆ ಬಂದು ಸೇರಿದ್ದರಿಂದ ಚರಂಡಿಯಾಯಿತು. ಇಷ್ಷು ಸಾಲದೆಂಬಂತೆ ಹುಚ್ಚು ಕುದುರೆ ಏರಿ ಪೇಟೆ ನಗರವಾಗುವ ಭರಾಟೆಯಲ್ಲಿ ಕಾರ್ಖಾನೆಗಳು ಹಟ್ಟಿಯನ್ನು ಒತ್ತಿಕೊಂಡು ಬೆಳೆದಿದ್ದವು. ಅವುಗಳ ಹೊಗೆ ಹಟ್ಟಿಯ ಹಸುಕಂದಗಳ ಉಸಿರೆಂಬೋ ನಾಳಿನ ಕನಸುಗಳನ್ನೂ ಕದಡಿದ್ದರೆ....ಕಾರ್ಖಾನೆಗಳ ಧಾರಾಳ ಕೊಳಚೆ ನೀರು ಈ ಚರಂಡಿಗೆ ಕಾಣ್ಕೆಯಾಗಿತ್ತು; ದೊಡ್ಡ ಚರಂಡಿಯಾಗಿ ನಾಮಕರಣಕ್ಕೆ ನಾಂದಿಯಾಯಿತು.
ಹಟ್ಟಿಯ ಜನಕ್ಕೆ ಬೆಳಿಗ್ಗೆ ಬರ್ಹಿದೆಸೆಯಿಂದ ಹಿಡಿದು ರಾತ್ರಿ ಪಡ್ಡೆ ಹುಡುಗರ ದೈಹಿಕ ಸಂಬಂಧಗಳಿಗೂ....ಈ ದೊಡ್ಡ ಚರಂಡಿಯ ಲಂಟಾಣ ಪೊದೆಗಳೇ ಗತಿ. ಅದಕ್ಕೆ ಸಾಕ್ಷಿ ಈ ದೊಡ್ಡ ಚರಂಡಿಯೇ.....ಕೆಲವೊಮ್ಮೆ ಬಟ್ಟಿ ಸಾರಾಯಿಯ ಸೀಸೆಗಳೂ ಈ ಚರಂಡಿಯಲ್ಲಿ ಬಚ್ಚಿಟ್ಟುಕೊಳ್ಳವುದೂ ಇದೆ.
ರಾತ್ರಿ ಬಿದ್ದ ಕನಸಿನ ಗ್ರಾಚಾರವೇ ಈ ರೀತಿ ಕಾಡುತ್ತಿದೆ;ಈ ಸುದ್ದಿ ಪೊಲೀಸ್ನೋರಿಗೆ ತಿಳಿದರೆ ತನ್ನನ್ನು ಗಲ್ಲಿಗೇರಿಸುವುದುಗ್ಯಾರಂಟಿ ಎಂದು ಬಗೆದ ನರಸಿಂಗ, ಮೊಗದಲ್ಲಿ ಹುಚ್ಚು ಧೈರ್ಯದ ಕಳೆ ತುಂಬಿಕೊಂಡು; ಯಾರಾದರೂ ನೋಡಿದರೆ ಕಷ್ಟ ಎಂದು ತಲೆ ಮೇಲೆ ವಲ್ಲಿ ಮುಸುಕು ಹಾಕಿಕೊಂಡು ದೊಡ್ಡ ಚರಂಡಿ ಇಳಿಯತೊಡಗಿದಾಗ-
ದಫೇದಾರ ಪೀರಸಾಬ:
ದೊಡ್ಡ ಚರಂಡಿಯ ಆಚೆಕಡೆ ಕೆಸರಿನಲ್ಲಿ ಏನೋ ಹುಡುಕುತ್ತಿದ್ದ ವ್ಯಕ್ತಿ "ಯಾರದು?" ಎಂದು ಪ್ರಶ್ನಿಸಿತು. ತಲೆ ಎತ್ತಿ ನೋಡಿದ ನರಸಿಂಗನ ಗುಂಡಿಗೆ "ಜಲ್‌" ಎಂದಿತು. ದಪೇದಾರ ಪೀರಸಾಬ...! ಅದೂ ದಿರಿಸಿನಲ್ಲಿದ್ದಾನೆ. ನರಸಿಂಗನಿಗೆ ಒಂದು... ಎಲ್ಡೂ...ಬರೊಂಗೆ ಆಯಿತು. ಕಣ್ಣಿಗೆ ಕತ್ತಲು ಕವಿಯಿತು.ಕೈಗೆ ಕೋಳ ಹಾಕಿ ಕತ್ತೆ ಮೇಲೆ ಕೂರಿಸಿ; ಕೊರಳಲ್ಲಿ ಈರುಳ್ಳಿ ಸರ ಆಕಿ... ಹಟ್ಟೀ ತುಂಬಾ ಸುತ್ತಾಡಿಸಿ... ಕೋಲ್ಟಿನಿಂದಾ ಸೀದಾ ಜೈಲಿಗೆ ಹಾಕಿದ ದಫೇದಾರ ಪೀರಸಾಬ; ನರಸಿಂಗ ಬೊಂಬ್ಡಾ ಹೊಡೆಯುತ್ತಿದ್ದರೂ ಕೇಳದೆ ನೇಣೆತ್ತಿದ.
"ಯಾರದು?" ಎಂದು ದಫೇದಾರ ಮತ್ತೆ ಕೇಳಿದಾಗ , ಎಚ್ಚೆತ್ತ ನರಸಿಂಗ " ನಾ...ನಾ...ನು..ನರಸಿಂಗ.. ಹಜಾಮ ನರಸಿಂಗ ಎಲ್ಡಕ್ಕೆ ಓಗೋಕೆ ಬಂದೇ" ಎಂದು ತೊದಲುತ್ತಾ ಚಲ್ಲಣದ ಲಾಡಿಗೆ ಕೈಹಾಕಿದ.
ದಫೇದಾರ ಪೀರಸಾಬನೂ ಕಿತ್ತೋದೋನೆ; ಬೆಳಿಗ್ಗೆನೇ ಸಾರಾಯಿ ಕುಡಿಯೋಕೆ ಬಂದು ಬಟ್ಟಿ ಸಾರಾಯಿ ಸೀಸೆ ಬಚ್ಚಿಟ್ಟ ಜಾಗ ಮರೆತು; ಕೆಸರಲ್ಲಿ ಗಬರ್ಲಾಡ್ತಾ ಇದಾನೆ. ನರಸಿಂಗನಿಗೆ ಅಷ್ಟು ಸಮಯ ಸಾಕಾಗಿತ್ತು. ಚಲ್ಲಣ ಬಿಚ್ಚಿ ಲಂಚಾಣದ ಪೊದೆ ಮರೆಯಾಗಿ; ಕಿವಿಯೆಂಬ ಶನಿಯನ್ನು ದೊಡ್ಡ ಚರಂಡಿಗೆ ಎಸೆದ. ಬಸಿರಿ ಹೆಂಗಸಿನಂತೆ ಕಾಜಗದಲ್ಲಿನ ಕಿವಿ ಚರಂಡಿ ಕೊಚ್ಚೆ ಜತೆ ತೇಲುತ್ತಾ ಹೊದ್ದ ಕಂಡು; ಕೆಮ್ಮಿ ಕ್ಯಾಕರಿಸಿ ಉಗಿಳಿದಾಗ ಅವನಿಗೆ ನಿರುಮ್ಮಳವಾಯಿತು.
ಫಿರ್ಯಾದು ಹೋಯಿತು:
ಗುಡ್ಲೆಂಬೋ ..... ಗುಡ್ಲಲ್ಲಿ ಕರಿನಿಂಗಿ ಮೂಲೆಯಲ್ಲಿ ಬಿಮ್ಮಗೆ ಕೂತು ಗುಡ್ಲಸೂರನ್ನೇ ನೋಡುತ್ತಿದ್ದಳು. ನರಸಿಂಗ ಏನೇ ಕೇಳಿದರೂ ಬರೀ ಕೈಸನ್ನೇ.... ಬಾಯಿಸನ್ನೆ ಅಷ್ಟೇ ಮಾಡುತ್ತಿದ್ದ ಕಂಡು " ಥೂ...ಇವಳವ್ವನ..." ಎಂದು ಹೆಗಲ ಮೇಲಿನ ವಲ್ಲಿ ಕೊಡವಿ ಕಸುಬಿನ ಡಬ್ಬಿಯನ್ನು ಕಂಕುಳಲ್ಲಿ ಸಿಗಿಸಿ ಪೇಟೆ ಕಡೆ ಹೊಂಟ.
ಸಂಜೀನಾಗ ಪೇಟೆಯಿಂದ ಬಂದ ನರಸಿಂಗ; ನರಸಿಂಗನಾಗಿರಲಿಲ್ಲ. ಪೇಟೆಯಲ್ಲಿ ಕೇಳಿದ ಸುದ್ದಿ ಅವನಿಗೆ ದೆವ್ವ ಬಡಿಸಿತ್ತು. ಜಸಟೀಸ ಸ್ವಾಮಿಗಳು ತಮ್ಮ ಬಲ ಕಿವಿಯ ಕಳುವಿನ ಬಗ್ಗೆ ಪೊಲೀಸರಿಗೆ ಕಂಪ್ಲೆಂಟು ಕೊಟ್ಟಿದ್ದು..."ನಿಮ್ಮದು ಹಿತ್ತಾಳೆ ಕಿವಿ ಹೇಗೆ ಕಳೆಯುತ್ತೆ" ಎಂದು ಪೊಲೀಸರು ಹೇಳಿದ್ದು... ಸರ್ಕಾರದ ಪರ ಪತ್ರಿಕೆಗಳು ಅದನ್ನೆ ಸುದ್ದಿ ಮಾಡಿ ಕೆತ್ತಿದ್ದು; ಕಲ್ಲಿನ ಕಟ್ಟಡದಲ್ಲಿ ಗದ್ದಲವಾಗಿ, ವಿರೋಧ ಪಕ್ಷಗಳ ಕಣ್ಣೊರಿಸಲು ಕಿವಿಯ ಆಯೋಗ ನೇಮಿಸಿದ್ದು.ಕೊನೆಗೆ ತಲೆಮರೆಸಿಕೊಂಡು ಗೃಹಮಂತ್ರಿಗಳ ಮನೆಯಲ್ಲಿ ಅವಿತಿದ್ದ ಕಿವಿಯನ್ನು ಅರೆಷ್ಟು ಮಾಡಿದ ಪೊಲೀಸರ ಎಫ್.ಐ.ಆರ್.ನಲ್ಲಿ ಕಿವಿಯ ಬೆಂಡೋಲೆಯ ಫಳಗುಟ್ಟುವ ವಜ್ರ ನಾಪತ್ತೆಯಾಗಿರುವ ಸುದ್ದಿ ಕುದುರೆ ಏರಿ ಊರೂರು ಅಲೆಯುವ ನಾಡಾಡಿಯಾಗಿತ್ತು
ಕರಿನಿಂಗಿ ಖಲಾಸ್:
ತಲೆತುಂಬಾ ಯೋಚನೆ; ಮೈತುಂಬಾ ಜ್ವರ ಹೊತ್ತು ಬಂದ ನರಸಿಂಗನಿಗೆ ಯಾಕೋ ಹಟ್ಟಿಯ ಬುಡ್ಡಿ ದೀಪಗಳು ಸಾವನ್ನು ನೆಪ್ಪಿಗೆ ತಂದವು.
ಗುಡ್ಲಲ್ಲಿ "ಗೌ" ಎನ್ನುತ್ತಿದ್ದ ಕತ್ತಲು ನೋಡಿ "ನಿಂಗೀ....ನಿಂಗೀ..." ಎಂದರೂ ಉತ್ತರವಿಲ್ಲ. ನರಸಿಂಗನಿಗೆ ಉರಿದೋಯ್ತು. "ಥೂ...ಬಿಸ್ತರನ ಹಳ್ಳಿ ಜ್ಯಾತೀನಾ ಕ್ಯಾ..." ಎಂದು ಕಡ್ಡಿ ಕೊರೆದು ಮೋಟು ಬೀಡಿ ಹೊತ್ತಿಸಿ... ಅದೇ ಕಡ್ಡೀಲಿ ಬುಡ್ಡಿ ಮುಟ್ಟಿಸಿದ. ಕರನಿಂಗವ್ವ ಬೆಳಗಿನ ಭಂಗಿಯಲ್ಲೇ ಮೂಲೆಯಲ್ಲಿ ಬಿಮ್ಮಗೆ ಕೂತು; ಬಿಟ್ಟಗಣ್ಣು ನೆಟ್ಟಗೆ ಬಿಟ್ಟು ಗುಡ್ಲಸೂರನ್ನೇ ನೋಡುತ್ತಿದ್ದಳು.... ಅವಳ ಹೊಟ್ಟೆ ಗಬ್ಬದ ಎಮ್ಮೆಯಂತೆ ಊದಿಕೊಂಡಿತ್ತು..! ಅಲ್ಲಾಡಿಸಿದಾಗ ಸೂರಿನ ಮೇಲಿದ್ದ ನೋಟ ನರಸಿಂಗನ ಮೇಲೆ ಬೀರಿದಳು.
ಇವಳ ಬುದ್ದಿ ಗೊತ್ತಿದ್ದ ನರಸಿಂಗ ಮೂಲೆಯಲ್ಲಿದ್ದ ಹಾರೆ ಸಲಿಕೆ ಹಿಡಿದು ಗುಡ್ಲ ಹಿಂಭಾಗದ ದೊಡ್ಡಿಯಲ್ಲಿದ್ದ ಹುಣಸೇ ಮರದ ಬೊಡ್ಡೆಯ ಕೆಳಗೆ ಗುಂಡಿಯನ್ನು ಅಗೆಯತೊಡಗಿದ. ಭಯ..ಆತಂಕ..ವಿಚಿತ್ರ ವೇದನೆಗಳಿಗೆ ಅವನ ಮನಸ್ಸು ಹುಳಿಯಾಗಿತ್ತು. ಗುಡ್ಲಲ್ಲಿ ಬಿಮ್ಮಗೆ ಕೂತ ಕರಿನಿಂಗಿಯ ಜುಟ್ಟನ್ನು ಹಿಡಿದು ದರ ದರ ಎಳೆದು ತಂದು ....................... ಗುಂಡಿಯನ್ನು ಜಾಗ್ರತೆಯಿಂದ ಮುಚ್ಚಿದ ನರಸಿಂಗ, ಯಾರೂ ನೋಡಿಲ್ಲವೆಂದು ಖಾತ್ರಿ ಮಾಡಿಕೊಂಡು; ಗುಡ್ಲು ಸೇರಿ ಈಚಲು ಚಾಪೆ ಎಳೆದು; ಹರಕು ಕಂಬಳಿಯನ್ನು ಗುಬರಲ ಹಾಕಿಕೊಂಡನು.
ಕೊನೆಯ ಅಂಕ ಅರ್ಥಾತ್ ಭರತ ವಾಕ್ಯ:
ಎಂದಿನಂತೆ ಅಂದೂ ಸೂರ್ಯದೇವನು ಏಳು ಕುದುರೆ ರಥ ಏರಿ ಬಸಕ್ಕನ ಗುಡ್ಲ ಹಿಂಭಾಗದಿಂದ ಮೇಲೆ ಬಂದ. ಹಟ್ಟೀಲಿ ವಿಚಿತ್ರ ಪರಿಸರ ತುಂಬಿತ್ತು. ತಂಪು ಪರಿಸರದ ಆಹ್ಲಾದತೆಯೇ ಆಗಲಿ, ಪಚ್ಚೆ ಹಸಿರ ಸೊಬಗ ಚೇತೋಹಾರಿತನಗಳೇ ಆಗಲಿ...ಯಾವುದೂ ಜೀವನಕ್ಕೆ ರೋಮಾಂಚನ ತರುವ ಸಾಧ್ಯತೆಗಳು ಅಲ್ಲಿರಲಿಲ್ಲ. ಮುಂಜಾನೆಯ ಇಬ್ಬನಿಯ ಕೊರೆತ ನಿಜಕ್ಕೂ ಆ ಪರಿಯ ಬದುಕಲ್ಲಿ ಇಬ್ಬಂದಿತನಗಳಲ್ಲದೇ ಮತ್ತಿನ್ನೇನೂ ಸೃಷ್ಟಿಸಿರಲಿಲ್ಲ. ಸೋನೆ ಮಳೆಯು ಮುಂಜಾನೆ ಕೆಂಬಿಸಿಲನ್ನು ಸವಕಲು ಸವಕಲಾಗಿ ಕಾಡುತ್ತಿತ್ತೇ ಹೊರತು; ಹೊಸತಾದ ಉಸಿರನ್ನಂತೂ ತರುತ್ತಲೇ ಇರಲಿಲ್ಲ. ಹಸಿರು... ಮರಗಿಡ.... ಹಕ್ಕಿ... ಆಕಾಶ...ಸೂರ್ಯ...ಚುಕ್ಕಿ....ಚಂದ್ರಮರು ಜಡ್ಡುಗಟ್ಟುತ್ತಿದ ಜೀವನಕ್ಕೆ ಒಂಚೂರೂ ಆಸೆಯ ಹೊಂಗಿರಣಗಳು ಬೀರಿರಲಿಲ್ಲ.
ಸೋನೆ ಮಳೆಯು ಮುಂಜಾನೆಯ ಕಾವಳದ ಜತೆ ಸೇರಿ; ಹಟ್ಟಿಯ ಜನ ನಡುಗುತ್ತಿದ್ದರೋ.. ಅಥವಾ ಆ ಬರಸಿಡಿಲಿನಂಥಾ ಸುದ್ದಿ ಕೇಳಿ ನಡುಗುತ್ತಿದ್ದರೋ... ತಿಳಿಯಲಾರದಂತಹ ವಿಚಿತ್ರ ಪರಿಸರ.
ಹಟ್ಟಿಯ ಜನರೆಲ್ಲಾ ನರಸಿಂಗನ ಗುಡ್ಲ ಹಿಂಭಾಗದ ದೊಡ್ಡಿಯಲ್ಲಿದ್ದ ಹುಣಿಸೇಮರದ ಹತ್ತಿರ ನೆರೆದಿದ್ದರು. ಹಟ್ಟಿಯ ಪಿಳ್ಳೆಗಳು ಸಂದುಗೊಂದುಗಳ ಕೊಚ್ಚೆಯಲ್ಲಿ ನುಗ್ಗಿ ಬಂದ ಪೋಲೀಸ್ ಜೀಪಿನ ಹತ್ತಿರ ನೆರೆದಿದ್ದರು. ದಫೇದಾರ ಪೀರಸಾಬ ಇನ್‌ಸ್ಪೆಕ್ಟರ್ ಆಜ್ಞೆಯಂತೆ; ಏನೇನೋ ಗುರುತು ಹಾಕಿಕೊಳ್ಳುತ್ತಿದ್ದ. ಇನ್‌ಸ್ಪೆಕ್ಟರ್ ಪ್ರಶ್ನೆಗಳಿಗೆ ಹಟ್ಟಿಯ ಹಿರಿಯರು ನಿರ್ನಿಮಿತ್ತವಾಗಿ ತಲೆ ಕರೆಯುತ್ತಾ ಯಮಯಾತನೆ ಪಡುತ್ತಿದ್ದರು.
ಇಷ್ಟೆಲ್ಲಾ ನಡೆಯುತ್ತಿದ್ದರೂ ನರಸಿಂಗನಂತೂ ಎಂದೂ ಮಾತಾಡದಂತೆ ಮೌನವಾಗೇ ಉಳಿದುಬಿಟ್ಟಿದ್ದ. ಹುಣಸೇ ಮರ ಹತ್ತಿದ ದಫೇದಾರ ಪೀರಸಾಬ ಹಗ್ಗ ಸಿಡಲಿಸಿದಾಗ, ನರಸಿಂಗನ ತಣ್ಣನೆಯ ದೇಹ ಕೊಂಚ ಕೊಂಚವೇ ಅಲುಗಾಡಿತು; ಅವನ ಜೀವಾತ್ಮ ;ಪರಮಾತ್ಮಗಳ ಮಧ್ಯಸ್ಥನಾದ ಕ್ಷೇತ್ರಜ್ಞನು ಪಿತೃಯಾನದ ಮಾರ್ಗವಾಗಿ, ಬ್ರಹ್ಮಸಾಕ್ಷಾತ್ಕಾರದ ಅಖಂಡ ಶಾಂತಿ ಅರಸುತ್ತಾ; ಸೃಷ್ಟಿ, ಲಯ, ಸ್ಥಿತಿಗಳನ್ನು ದಾಟಿ ತಾರಾ ಮಂಡಲ ಸೇರಿ; ಇನ್‌ಸ್ಪೆಕ್ಟರ್‌ ಹೆಂಡತಿಯ ಮೂಗಿನಲ್ಲಿದ್ದ ವಜ್ರದ ನತ್ತಿನ ಹಾಗೆ ಒಮ್ಮೆ ಫಳಗುಟ್ಟಿತು.
(ರಷ್ಯನ್‌ ಕತೆಗಾರ ನಿಖೋಲಾಯ್ ಗೋಗೋಲ್ ಅವರ 'ದಿನೋಸ್' ಕತೆಯಿಂದ ಸ್ಫೂರ್ತಿ.)














Tuesday, August 08, 2006


ನಿಧಿ
(ಒಂದು ಸಣ್ಣಕತೆ)


-ಆರ್.ಎಸ್.ವೆಂಕಟರಾಜ್

ಒಂದು ಪುರಾತನ ದೃಶ್ಯ:

ಚೋಳರಾಜನ ಆಸ್ಥಾನ ಪಂಡಿತರಾದ ಅಗಸ್ತ್ಯ ಮುನಿಗಳ ವಂಶಸ್ಥರಾದ ಪ್ರಾಥಿವಧಿ ಮಹರ್ಷಿಗಳು, ಪರಿವಾರದೊಂದಿಗೆ ತಮಿಳು ಸೀಮೆಯಿಂದ ದೈವ ದರ್ಶನಕ್ಕೆಂದು ಮೈಸೂರು ಸೀಮೆಯ ಹಲವು ಕ್ಷೇತ್ರಗಳ ದರ್ಶನ ಪಡೆಯುತ್ತಾರಂತೆ. ಅಂತಹ ಸಂದರ್ಭದಲ್ಲಿ ಕೇಶವಾಪುರಕ್ಕೆ ಆಗಮಿಸುತ್ತಾರೆ. ಕೇಶವಾಪುರಕ್ಕೆ ಆತುಕೊಂಡೇ ಇದ್ದ ಚೆನ್ನಕೇಶವ ಬೆಟ್ಟ, ಬೆಟ್ಟದ ಮೇಲಿನ ದಟ್ಟಕಾಡು, ತಪಸ್ಸಿಗೆ ಪ್ರಶಸ್ತವಾದ ಗುಹೆಗಳು, ಎಲ್ಲದ್ದಕ್ಕೂ ಮಿಗಿಲಾಗಿ ಶಿಥಿಲಾವಸ್ಥೆಯಲ್ಲಿದ್ದ ಚೆನ್ನಕೇಶನ ದೇವಸ್ಥಾನ ಅವರನ್ನು ಆಕರ್ಷಿಸುತ್ತದೆ. ಸ್ಥಳ ಪುರಾಣದ ಅನುಸಾರ, ಪೂರ್ವದಲ್ಲಿ ಪ್ರತಿಷ್ಠಿತ ಸಂಸ್ಥಾನವಾಗಿದ್ದ ಕೇಶವಾಪುರದ ಈ ದೇವಸ್ಥಾನವನ್ನು ಇಮ್ಮಡಿ ಪುಲಕೇಶಿ ಮಹಾರಾಜ ಕಟ್ಟಿಸಿದನೆಂದು ಪ್ರತೀತಿ ಇದೆ. ಶಿಷ್ಯರೊಂದಿಗೆ ಅಂದಿನ ರಾತ್ರಿ ದೇವಸ್ಥಾನದಲ್ಲಿ ಬೀಡುಬಿಟ್ಟ ಪ್ರಾಥಿವಧಿ ಮಹರ್ಷಿಗಳ ಕನಸ್ಸಿನಲ್ಲಿ ಚೆನ್ನಕೇಶವನ ದರ್ಶನವಾಗಿ ಅಲ್ಲಿಯೇ ನೆಲೆಗೊಳ್ಳುವಂತೆ ಅಪ್ಪಣಿಯಾಗುತ್ತದೆ. ಪ್ರೇರಣೆಯನ್ನು ಚೋಳನಿಗೆ ಅರಿಕೆಮಾಡಿಕೊಂಡ ಮಹರ್ಷಿಗಳು, ಆಪ್ತಶಿಷ್ಯರಿಬ್ಬರು ಹಾಗೂ ಮಗಳು ಅವಧಿಯನ್ನು ಹೊರತುಪಡಿಸಿ ಉಳಿದವರನ್ನು ತಮಿಳು ಸೀಮೆಗೆ ಮರಳಲು ಅಪ್ಪಣೆ ಕೊಡುತ್ತಾರೆ.

ಸದರಿ ವಿಷಯವನ್ನು ತಿಳಿದ ಕೇಶವಾಪುರದ ಅಂದಿನ ಶ್ಯಾನುಭೋಗ ವೇದಾಂತಾಚಾರ್ಯರು ಘನಪಂಡಿತರೆಂದು ಕೇಳಿದ್ದ ಪ್ರಾಥಿವಧಿ ಮಹರ್ಷಿಗಳ ಕುಶಲ ವಿಚಾರಿಸಲು ಭೇಟಿನೀಡುತ್ತಾರೆ. ಪ್ರಾಥಿವಧಿ ಮಹರ್ಷಿಗಳು ಭೇಟಿಗೆ ನಿರಾಕರಿಸುತ್ತಾರೆ. "ನಮ್ಮಿಂದ ಅರಿಯದೇ ಅಪಚಾರವಾಗಿದ್ದರೆ ಆರ್ಯರು ಮನ್ನಿಸಬೇಕೆಂದು" ಅಂಗಲಾಚಿದಾಗ, ವೇದಾಂತಾಚಾರ್ಯರಿಗೆ ಭೇಟಿಗೆ ಅವಕಾಶ ಕಲ್ಪಿಸಿದ ಪ್ರಾಥಿವಧಿ ಮಹರ್ಷಿಗಳು ಕುಶಲೋಪರಿಯ ನಂತರ ಪಾಳು ಬಿದ್ದಿರುವ ಚೆನ್ನಕೇಶವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ನಿತ್ಯ ಪೂಜೆ ಕುರಿತು, ಉತ್ಸವ ಮೂರ್ತಿಗಾಗಿ ಕೇಶವಾಪುರದಲ್ಲಿ ಒಂದು ಗುಡಿ ನಿರ್ಮಾಣ ಇತ್ಯಾದಿ ಅಂಶಗಳನ್ನು ತಿಳಿಸುತ್ತಾರೆ. "ತಮ್ಮ ಪಾದ ಸ್ಪರ್ಶದಿಂದ ಕೇಶವಾಪುರ ಪಾವನವಾಗಿದೆ, ತಮ್ಮ ಎಲ್ಲಾ ಆಜ್ಞೆಗಳನ್ನು ಶಿರಸಾವಹಿಸುತ್ತೇನೆ, ದೇವರು ನನಗೆ ಸಾಕಷ್ಟು ದಯಪಾಲಿಸಿದ್ದಾನೆ, ಮೌಢ್ಯರ ಮಧ್ಯೆ ನಾವೂ ಮೌಢ್ಯರಾಗಿದ್ದೇವೆ, ದಯಮಾಡಿ ಕೇಶವಾಪುರವನ್ನು ಕೈಹಿಡಿದು ನಡೆಸಬೇಕು. ನಿಮ್ಮ ಸೇವೆಗೆ ಐದು ಎಕರೆ ಮಾಗಾಣಿಯನ್ನು ಬಿಡುತ್ತೇನೆ, ಕರಾವಿಗೆ ಕಷ್ಟವಾಗದಂತೆ ಎರಡು ಹಸುವನ್ನು ಬಿಡುತ್ತೇನೆ. ದಯಮಾಡಿ ನನಗಿರುವ ಏಕಮಾತ್ರ ಕುಡಿ ವೈಷ್ಣವಾಚಾರ್ಯನಿಗೆ ವೇದಾಧ್ಯಯನ ಬೋಧಿಸಬೇಕು ಎಂದು ವಿನಮ್ರವಾಗಿ ವಿನಂತಿಸುತ್ತೇನೆ. ಸ್ವಾರ್ಥ ಎಂದು ತಿರಸ್ಕರಿಸಬಾರದು" ಎಂದು ಬೇಡಿಕೊಂಡರು. ಮನಸ್ಸಿನಲ್ಲೇ ನಗುತ್ತಾ ಪ್ರಾಥಿವಧಿ ಮಹರ್ಷಿಗಳು 'ಅಸ್ಥು' ಎಂದರು.

ವೈಷ್ಣವಾಚಾರ್ಯ ನಿತ್ಯವೂ ಬೆಟ್ಟವೇರಿ ಪ್ರಾಥಿವಧಿ ಮಹರ್ಷಿಗಳ ಇಬ್ಬರು ಶಿಷ್ಯರ ಜೊತೆಯಲ್ಲಿ ವೇದಾಧ್ಯಯನ ವಟುವಾಗಿ ನಿಷ್ಠೆಯಿಂದ ಅಧ್ಯಯನ ಮತ್ತು ಗುರುವಿನ ಸೇವೆ ಮಾಡತೊಡಗಿದ. ಮಹರ್ಷಿಗಳ ಮಗಳು ಅವಧಿ ನೈವೇದ್ಯಕ್ಕೆ ಅಣಿಮಾಡಿದರೆ, ಶಿಷ್ಯರು ಹೂವು ಮತ್ತು ದರ್ಬೆಯನ್ನು ಕಾಡಿನಿಂದ ಕೊಯ್ದುತರುತ್ತಿದ್ದರು. ಪೂಜಾ ಸಮಯ ಮತ್ತು ಶಿಷ್ಯರಿಗೆ ಬೋಧಿಸುವ ಸಮಯವನ್ನು ಹೊರತುಪಡಿಸಿ ಉಳಿದ ಸಮಯದಲ್ಲಿ ಪ್ರಾಥಿವಧಿ ಮಹರ್ಷಿಗಳು ದೇವಸ್ಥಾನದ ಹಿಂಭಾಗದ ಇಳಿಜಾರಿನಲ್ಲಿದ್ದ ಗುಹೆಸೇರಿ ತಪಸ್ಸಿನಲ್ಲಿ ಲೀನಲಾಗುತ್ತಿದ್ದರು.

ಮುಂದಿನದಲ್ಲವೂ ಇತಿಹಾಸ..ಚೆನ್ನಕೇಶವ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರವಾಯಿತು, ನಿತ್ಯ ಪೂಜೆ ಪ್ರಾರಂಭವಾಯಿತು. ಉತ್ಸವ ಮೂರ್ತಿಗಾಗಿ ಕೇಶವಾಪುರದಲ್ಲಿ ಒಂದು ಗುಡಿ ನಿರ್ಮಾಣವಾಯಿತು. ವರ್ಷಕೊಮ್ಮೆ ಚೆನ್ನಕೇಶವ ಸ್ವಾಮಿಯ ರಥೋತ್ಸವ ನಡೆಯತೊಡಗಿತು.

ಕಾಲಕ್ರಮೇಣದಲ್ಲಿ ಶ್ರಾವಣಮಾಸದ ಒಂದು ಮುಂಜಾನೆ ವೈಷ್ಣವಾಚಾರ್ಯ ಅಧ್ಯಯನಕ್ಕಾಗಿ ಬೆಟ್ಟದ ಕೊರಕಲು ದಾರಿಯನ್ನು ಏರಿಬರುತ್ತಿದ್ದಾಗ, ದೂರದಲ್ಲಿ ಗುರುಗಳ ಮಗಳು ಅವಧಿ ದರ್ಭೆಯನ್ನು ಕೊಯ್ಯುತ್ತಿರುವುದು ಕಾಣಿಸಿತು. ಹತ್ತಿರಹೋಗಿ ವಿಚಾರಿಸಿದಾಗ, ದಿನಸಿ ಮುಗಿದಿರುವುದರಿಂದ ಉಳಿದ ಶಿಷ್ಯರು ಊರೊಳಗಿನ ಅಗ್ರಹಾರಕ್ಕೆ ಹೋಗಿದ್ದಾರೆಂದು ತಿಳಿಸಿದಳು.

ಕಠಿಣ ಬ್ರಹ್ಮಚರ್ಯೆಯೂ ಅಧ್ಯಯನದ ಒಂದು ಭಾಗವಾಗಿದ್ದರಿಂದ, ಜೊತೆಯಲ್ಲೇ ಇದ್ದರೂ ಅವಧಿಯನ್ನು ಇಷ್ಟು ಹತ್ತಿರದಿಂದ ಅವಳನ್ನು ವೈಷ್ಣವಾಚಾರ್ಯ ಅಂದೇ ನೋಡಿರುವುದು. ಸ್ನಿಗ್ಧಕನ್ಯೆಯಾದ ಅವಳು ಹಾಲಿನಿಂದ ತೊಳೆದ ಚಂದನದ ಬೊಂಬೆಯಂತಿದ್ದಾಳೆ, ಶ್ಯಾಪಗ್ರಸ್ಥಳಾಗಿ ಭೂಲೋಕಕ್ಕೆ ಬಂದ ಅಪ್ಸರೆಯಂತೆ ಕಂಗೊಳಿಸುತ್ತಾಳೆ. ಅವಧಿಯ ಪರಿಸ್ಥಿತಿಯೂ ಸಮಾನ ಚಿಂತನೆಯಲ್ಲಿ ಡೋಲಾಯಮಾನವಾಗಿತ್ತು. ಅಷ್ಟು ಹತ್ತಿರನಿಂತ ವೈಷ್ಣವಾಚಾರ್ಯನ ಸುರದ್ರೂಪ ಅವಳಿಗೆ ಮಂಕು ಕವಿಸಿತು. ನಾರುಮಡಿಯ ವಸ್ತ್ರದ ಮಡಿಲಲ್ಲಿ ಕೊಯ್ದಿದ್ದ ದರ್ಭೆ ಮತ್ತು ಹೂವು ಅವಳಿಗೆ ಅರಿವಿಲ್ಲದಂತೆ ಕೆಳಗೆ ಚೆಲ್ಲಿದವು. ನಾಚಿಕೆಯಿಂದ ಕಾಲಿನ ಹೆಬ್ಬೆರಳಿಂದ ನೆಲವನ್ನು ಮೀಟತೊಡಗಿದಳು. ಶ್ರಾವಣ ಮಾಸದ ಆಹ್ಲಾದತೆಯ ಪ್ರಕೃತಿಯಲ್ಲಿ ಕಾಮದೇವನ ಧನಸ್ಸಿನಿಂದ ಬಾಣವೊಂದು ಚಿಮ್ಮಿತು.. ಎರಡು ಜೀವಗಳು ಇನ್ನೇನು ಒಂದಾಗುವ ಸಂದರ್ಭದಲ್ಲಿ .. ಹಿಂದಿನ ಗುಹೆಯಿಂದ ತರಗೆಲೆಮೇಲೆ ಹೆಜ್ಜೆಯಿಟ್ಟ ಸಪ್ಪಳ ಕೇಳಿಸಿತು. ಕಾಡು ಪ್ರಾಣಿಯಿರಬೇಕು ಎಂದು ಇಬ್ಬರೂ ಹಿಂತಿರುಗಿ ನೋಡಿದಾಗ.. ವ್ಯಾಘ್ರರಾದ ಪ್ರಾಥಿವಧಿ ಮಹರ್ಷಿಗಳು ಕಮಂಡಲದಿಂದ ಗಂಗೆಯನ್ನು ಬಲಗೈಗೆ ಸುರಿದು..ಹಣೆಗೆ ಮುಟ್ಟಿಸಿ, ಮನಸ್ಸಿನಲ್ಲೇ ಮಂತ್ರ ಜಪಿಸಿ 'ಕಾಮಾತುರನಾದ ನೀನು ಷಂಡನಾಗು..ರೌರವ ನರಕಕ್ಕೆ ಹೋಗು' ಎಂದು ವೈಷ್ಣವಾಚಾರ್ಯನ ತಲೆಯಮೇಲೆ ಪ್ರೋಕ್ಷಿಸಿ ಶಾಪ ನೀಡಿದರು. ನಾಚಿಕೆ ಅವಮಾನದಿಂದ ಕುಪಿತಗೊಂಡ ಅವಧಿ ದೇವಸ್ಥಾನದ ಕಡೆಹೊರಟರೆ.. ವೈಷ್ಣವಾಚಾರ್ಯ ತಲೆ ತಗ್ಗಿಸಿ ಕೊರಕಲು ದಾರಿಯ ಮೂಲಕ ಬೆಟ್ಟವನ್ನು ಇಳಿಯುತ್ತಾ ಅಗ್ರಹಾರದ ಕಡೆ ಹೊರಟ.

ವಿಷಯ ತಿಳಿದ ವೇದಾಂತಾಚಾರ್ಯ ಬೆಳೆದ ಮಗ ವೈಷ್ಣವಾಚಾರ್ಯ ಎನ್ನುವುದನ್ನೂ ನೋಡದೆ ದನಕ್ಕೆ ಬಡಿದಹಾಗೆ ಬಡಿದು, ಪ್ರಾಥಿವಧಿ ಮಹರ್ಷಿಗಳ ಕ್ಷಮೆಯಾಚಿಸಲು ಚೆನ್ನಕೇಶವನ ಬೆಟ್ಟ ಏರತೊಡಗಿದರು. ಎದುರಿಗೆ ಪ್ರಾಥಿವಧಿ ಮಹರ್ಷಿಗಳು ಇಳಿದು ಬರುತ್ತಿದ್ದರು. ಇಬ್ಬರು ಶಿಷ್ಯರು ತಲೆಯಮೇಲೆ ಸಾಮಾನು ಸರಂಜಾಮು ಹೊತ್ತಿದ್ದರು, ಎಲ್ಲರಿಗಿಂತ ಹಿಂದೆ ಅವಧಿ ನಿಧಾನವಾಗಿ ಇಳಿಯುತ್ತಿದ್ದಳು. ಓಡಿಹೋಗಿ ಪ್ರಾಥಿವಧಿ ಮಹರ್ಷಿಗಳ ಕಾಲು ಹಿಡಿದು "ಮಹಾಪ್ರಭು ಘೋರ ಅಪರಾಧವಾಗಿದೆ..ದಯಾಳುಗಳು ಶಾಂತಿಸಬೇಕು. ಒಬ್ಬನೇ ಮಗ, ಪೀಳಿಗೆ ನಿಂತುಹೋಗುತ್ತದೆ.. ದಯವಿಟ್ಟು ಶಾಪವನ್ನು ಹಿಂದೆ ಪಡೆಯಬೇಕು" ಎಂದು ಕಣ್ಣೀರಿನಿಂದ ಅವರ ಕಾಲನ್ನು ತೊಳೆದರು. "ವೇದಾಂತಾಚಾರ್ಯ ಕೊಟ್ಟ ಶಾಪವನ್ನು ಹಿಂಪಡೆಯುವ ಪ್ರಶಕ್ತಿಯೇ ಇಲ್ಲ..ಏಕೆಂದರೆ..ಯಾವ ಕಾಲಕ್ಕೆ ಏನು ಆಗಬೇಕೋ ಅದು ಆಗಿಯೇ ತೀರಬೇಕು..ಅದು ಮೊದಲೇ ನಿರ್ಣಯವಾಗಿರುತ್ತದೆ..ಇದರಲ್ಲಿ ನಾವೆಲ್ಲರೂ ನಿಮಿತ್ತ ಮಾತ್ರ" ಎಂದರು. "ಇಲ್ಲ ಮಹಾಪ್ರಭು ಪ್ರಾಯಶ್ಚಿತ್ತವಾಗಿ ನನ್ನ ಪ್ರಾಣವನ್ನೇ ಹರಣಮಾಡುತ್ತೇನೆ..ತಾವು ನನ್ನ ಕೋರಿಕೆಗೆ ಅಸ್ಥು ಎನ್ನುವವರೆಗೂ ನಿಮ್ಮ ಪಾದವನ್ನು ಬಿಡುವುದಿಲ್ಲ." ಎಂದು ಕಾಲುಗಳನ್ನು ಗಟ್ಟಿಯಾಗಿ ಹಿಡಿದ ವೇದಾಂತಾಚಾರ್ಯರಿಗೆ, "ನಿಮ್ಮ ಭಕ್ತಿಗೆ, ಶ್ರದ್ಧೆಗೆ ನಾವು ಪ್ರಸನ್ನರಾಗಿದ್ದೇವೆ. ಎದ್ದೇಳಿ ಶಾಪದ ಗಡುವನ್ನು ವಿಸ್ತರಿಸುತ್ತೇವೆ..ನಾವು ಕೊಟ್ಟ ಶಾಪ ಮುಂದಿನ ಪೀಳಿಗೆಗೆ ಅರ್ಥಾತ್ ನಿಮ್ಮ ಮೊಮ್ಮಗನಾಗಿ ಜನ್ಮತಾಳಿವ ಕೇಶವಾಚಾರ್ಯ ನಾಮಸ್ಥನಿಗೆ ಅನ್ವಯಿಸುತ್ತದೆ..ನಿಮ್ಮ ತತ್ಪರತೆಗೆ ಮೆಚ್ಚಿದ್ದೇನೆ..ಉಪಸಂಹಾರವಾಗಿ ಒಂದು ವರ ನೀಡುತ್ತೇವೆ..ಲಕ್ಷ್ಮಿ ನಿಮ್ಮ ಮನೆಯಲ್ಲಿ ಕ್ಷೀಣಿಸದಿರಲಿ ತಥಾಸ್ಥು." ಎಂದು ಪ್ರಾಥಿವಧಿ ಮಹರ್ಷಿಗಳು ಶಿಷ್ಯರಸಮೇತ ಬೆಟ್ಟವನ್ನು ಇಳಿಯತೊಡಗಿದರು. ಅಂಕದಪರದೆ ಜಾರಿದ ನಂತರ ನಟಿಗೆ ಇರುವ ಉದ್ವಿಗ್ನತಾ ಭಾವದೊಂದಿಗೆ ಮಗಳು ಅವಧಿ ತಿರುವಿನಲ್ಲಿ ಮರೆಯಾದಳು.

ಹಗೇವಿನ ಪ್ರಸಂಗ:

ನಸುಕಿನ ತಿಳಿ ಬೆಳದಿಂಗಳಲ್ಲಿ ವೆಂಕು ಒಬ್ಬಳೇ ಬತ್ತದ ಹಗೇವಿಗೆ ಏಣಿಯ ಮೂಲಕ ಇಳಿದು, ಬೆಳಿಗ್ಗೆ ಬತ್ತ ಕುಟ್ಟಲು ಬರುವ ಆಳುಗಳ ಸಂಖ್ಯೆಯನ್ನು ಮನಸ್ಸಿನಲ್ಲೇ ಮೂಡಿಸಿಕೊಂಡು, ಕಡೆಯ ಪಕ್ಷ ಎರಡು ಪಲ್ಲಬತ್ತವಾದರೂ ಹಗೇವಿನಿಂದ ಹೊರಮೊಗೆದು ಅಂಗಳದಲ್ಲಿ ಹಾಕಬೇಕು ಎಂದು ಎಣಿಸಿದಳು. ಬೆಳ್ಳಿ ಚುಕ್ಕಿ ಮೂಡಿದ್ದರೂ, ದೂರದ ದೇವಸ್ಥಾನದ ರಥಬೀದಿಯಲ್ಲಿ ಚೆನ್ನಕೇಶವನ ರಥೋತ್ಸವದ ಗೌಜುಗದ್ದಲ ಅಲೆ ಅಲೆಯಾಗಿ ಊರತುಂಬೆಲ್ಲಾ ಪಸರಿಸುತ್ತಲೇ ಇತ್ತು. ರಥೋತ್ಸವಕ್ಕೆ ಹೋದ ಜೀತದಾಳುಗಳನ್ನು, ರಥೋತ್ಸವಕ್ಕೆಂದು ಬಂದ ನೆಂಟರಿಷ್ಟರನ್ನು, ಊರಿನ ಉಸಾಬರಿಯಲ್ಲಾ ತನ್ನದೇ ಎಂದು ತಿರುಗುವ ಗಂಡ ಶ್ಯಾನುಭೋಗ ಕೇಶವಾಚಾರ್ಯರನ್ನು ಮನಸ್ಸಿನಲ್ಲೇ ಹಿಡಿಶಾಪಹಾಕುತ್ತಾ, ತನ್ನ ಹಣೆ ಬರಹವೇ ಹೀನವಾಗಿದ್ದಾಗ ಯಾರನ್ನು ಅಂದು ಏನು ಪ್ರಯೋಜನ ಎಂದು ಮಂಕರಿಯಲ್ಲಿ ಬತ್ತ ತುಂಬತೊಡಗಿದಳು.

ಆಳುಗಳೆಲ್ಲಾ ತೇರು ನೋಡಲು ಹೋಗಿರುವುದು ಗೊತ್ತಿದ್ದ ಶೇಷಣ್ಣ ದೆವ್ವದಂಥಹ ತಲೆಬಾಗಿಲನ್ನು ದೂಡಿಕೊಂಡು ಒಳಬಂದು "ಏ ಮಂಜ್ಯಾ..ಲೇ ತಿಪ್ಪಣ್ಣಾ..ಎಲ್ಲಿ ಸತ್ತಿದ್ದೀರೋ ಎಲ್ಲಾ.., ಗದ್ದೆಗೆ ಏತ ಎತ್ತಬೇಕು. ಮನೇಲಿ ನೋಡಿದರೆ ನೆಂಟರು ಬಂದವರೆ .. ಕೆಲಸ ಎಷ್ಟತೈ..ಏನ್ಕತೆ ?" ಎಂದು ಕೂಗಾಡತೊಡಗಿದ.

ಹಗೇವಿನೊಳಗೆ ಇಳಿದಿದ್ದ ವೆಂಕುವಿಗೆ ಆ ಧ್ವನಿಯಾರದೆಂದು ಸ್ಪಷ್ಟವಾಗಲಿಲ್ಲ. ಮಂಕರಿಯಲ್ಲಿ ಬತ್ತವನ್ನು ಹೊತ್ತು ಏಣಿಹತ್ತಿ ಹೊರಬಂದಳು. ಮಬ್ಬು ಕತ್ತಲೆಯಲ್ಲಿ ಏಕ್‌ದಂ ಶೇಷಣ್ಣನನ್ನು ನೋಡಿ ಕೊಂಚ ಬೆದರಿ, "ನೀನಾ ಶೇಷಪ್ಪಣ್ಣಾ..ನಾನು ಯಾರೋ ಅಂದುಕೊಂಡೆ..ಮನೇಲಿ ಯಾರೂ ಇಲ್ಲ..ಎಲ್ಲರೂ ರಥೋಸ್ಥವಕ್ಕೆ ಹೋಗೌವ್ರೆ" ಎಂದು ಅಸ್ಥವ್ಯಸ್ಥವಾಗಿದ್ದ ಸೆರಗನ್ನು ಸರಿಪಡಿಸಿಕೊಂಡಳು. "ಹೌದಾ ನೀವ್ಯಾವಾಗ ಮನೆಗೆ ಬಂದ್ರಿ ವೆಂಕತ್ತೆ?" " ತೇರು ಕುಂಬಾರರ ಓಣಿಗೆ ತಿರುಗಿದಾಗ ಬಂದೆ..ನಸುಕಿನಲ್ಲೇ ಆಳುಗಳು ಬತ್ತ ಕುಟ್ಟೋಕೆ ಬರ್ತಾರೆ..ಅದ್ಕೇಯ ಹಗೇವಿನಿಂದ ಬತ್ತ ಹೊರ್ತಾಇದ್ದೀನಿ..ನಿನ್ನೆ ಸಂಜೇಲೆ ಆ ಮಂಜನಿಗೆ ಹೇಳಿದ್ದೆ, ಕಡೇಕೆ ಆಳುಗಳಿಗೂ ಅಲುಸಾಗಿಬಿಟ್ಟೆ ನೋಡಿ".

"ಬಿಡೀ ವೆಂಕತ್ತೆ ಯ್ಯಾಕೆ ಬೇಜಾರು ಮಾಡ್ಕೋತೀರಿ..ನಾನಿಲ್ಲವೇ, ಕೊಡೀ ಮಂಕರಿಯಾ ನಾನು ಬತ್ತವನ್ನು ತುಂಬುತ್ತೇನೆ..ನೀವು ಅಂಗಳದಲ್ಲಿ ಹಾಕುವಿರಂತೆ," ಎಂದು ಮಂಕರಿ ಹಿಡಿದು ಏಣಿ ಮೂಲಕ ಹಗೇವಿಗೆ ಇಳಿಯುತ್ತಾ, ಹಿಂದೆ ಇಳಿಯುತ್ತಿದ್ದ ವೆಂಕುವನ್ನು ಕುರಿತು "ಈ ಶ್ಯಾನುಬೋಗ ಕೇಶವಾಚಾರ್ಯರನ್ನು ಕಟ್ಟಿಕೊಂಡು ನಿಮಗೆ ಯಾವುದೇ ಸುಖವಿಲ್ಲದಾಗಿದೆ ನೋಡಿ ವೆಂಕತ್ತೆ..ಈ ಚಿಕ್ಕ ವಯಸ್ಸಿಗೇ ನೀವು ಪಡೋ ಕಷ್ಟ ನೋಡಿದ್ರೆ ನನಗಂತೂ ಕರುಳು ಚುರುಕ್ ಅನಿಸುತ್ತೆ" ಎಂದಾಗ ಹಗೇವಿನ ಗೊಡೆಗೆ ಆತುಕೊಂಡಿದ್ದ ಹಲ್ಲಿ ಲಚ್..ಲಚ್..ಲಚ್.. ಎಂದು ಶಬ್ಧಮಾಡಿದ್ದು ನೋಡಿ "ಕೃಷ್ಣ..ಕೃಷ್ಣ..ಸತ್ಯ ನೋಡಿ" ಎಂದ. ಸೀರೆ ಸೆರಗನ್ನು ಸಿಂಬೆಯಂತೆ ಸುತ್ತಿ ತಲೆಮೇಲಿಟ್ಟು "ಯಾವ ಜನ್ಮದಲ್ಲಿ ಮಾಡಿದ ಪಾಪವೋ ಕರ್ಮವನ್ನು ಸವೆಸಬೇಕು ಶೇಷಪ್ಪಣ್ಣ" ಎಂಧು ನಿರ್ಲಿಪ್ತವಾಗಿ ತುಂಬಿಸಿದ ಬತ್ತದ ಮಂಕರಿಯನ್ನು ಅವನು ಹೊರೆಸಿದಾಗ ಅಂಗಳದಲ್ಲಿ ಸುರಿಯಲು ಹೊರಟಳು. ಮೂರನೇ ಮಂಕರಿ ತಲೆಮೇಲೆ ಹೊರಸುವಾಗ "ವೆಂಕತ್ತೇ ಈ ಸಲ ಬರುವಾಗ ಬುಡ್ಡಿ ದೀಪ ಒಂದು ಕೋಲು ತಗಂಡು ಬನ್ನಿ..ಆ ಮೂಲೇಲಿ ನೋಡಿ ಹಾವು ಹರಿದಾಡಿದಂಗೈತೆ". ಅವನು ಹಾಗೆ ಅಂದದ್ದೇ ತಡ ಘಾಬರಿಯಾದ ವೆಂಕು ತಲೆ ಮೇಲಿನ ಭಾರದ ಮಂಕರಿ ಬತ್ತವನ್ನು ಕೆಳಗೆ ಚೆಲ್ಲಿ ಬಿಗಿಯಾಗಿ ಶೇಷಪ್ಪನನ್ನು ಹಿಡಿದಳು. ದಪ್ಪ ಪುಷ್ಪವಾಗಿದ್ದ ವೆಂಕುವಿನ ಭಾರಕ್ಕೆ ಅವನು ಆಯ ತಪ್ಪಿ ಅವಳನ್ನು ಹಿಡಿದೇ ಹಿಂದೆ ಬಿದ್ದನು. ಸಂಕೋಚದಿಂದ ಮುದುಡಿದ ವೆಂಕು ಸಾವರಿಸಿಕೊಂಡು..ಏಣಿ ಹತ್ತಿ ಬುಡ್ಡಿ ದೀಪ ಕೋಲು ತಗಂಡುಬರಲು ಹೋದಳು. ಶೇಷಪ್ಪನ ತಲೆತುಂಬೆಲ್ಲಾ ಹಾವಿನದೇ ಚಿಂತೆ ಸುತ್ತಿಕೊಂಡಿತು. ತದೇಕ ಚಿತ್ತದಿಂದ ಕಣ್ಣು ಕಿಸಿದು ಹಾವನ್ನೇ ನೋಡತೊಡಗಿದ. ಹಾವು ಕಾಟುಹಾಕಿದರೆ ಹೇಗೆ? ಏಣಿ ಹತ್ತಿ ಮೇಲೆ ಹೋದರೆ? "ನೀನೆಂಥಾ ಗಂಡಸು" ಎಂದು ವೆಂಕತ್ತೆ ಹೇಳಿದರೆ? ಕಷ್ಟದಲ್ಲಿರುವ ಹೆಂಗಸಿಗೆ ಸಹಾಯ ಮಾಡದಿದ್ದರೆ ಹೇಗೆ? ಹೀಗೆ ತರ್ಕ ವಿತರ್ಕ ವಾದಗಳು ಹಾವಿನಂತೆ ನರ್ತನ ಮಾಡುವ ಸಂದರ್ಭದಲ್ಲೇ, ವೆಂಕು ಬುಡ್ಡಿ ದೀಪ, ಕೋಲು ತಗಂಡು ಏಣಿ ಇಳಿದಳು. ಎಡಗೈಯಲ್ಲಿ ದೀಪ, ಬಲಗೈಯಲ್ಲಿ ಕೋಲು ಹಿಡಿದು ಶೇಷಪ್ಪ ದೀಪವನ್ನು ಹಾವಿನ ಹತ್ತಿರ ತಂದು ಇನ್ನೇನು ಹಾವನ್ನು ಬಡಿಯಬೇಕು ಎನ್ನುವಾಗ..ಅದು ಹಾವಾಗಿರದೇ ಡೊಂಕಾಗಿ ಹಾವಿನ ಆಕಾರದಲ್ಲಿದ್ದ ಸೆಣಬಿನ ನಾರಾಗಿತ್ತು."ಹೆದರುಪುಕ್ಕಲ" ಎಂದು ವೆಂಕು ಗಹಗಹಿಸಿ ನಕ್ಕಳು. ಸೆಣಬಿನನಾರನ್ನು ಕೈಲಿ ಹಿಡಿದ ಶೇಷಪ್ಪ "ಹಾವು ವೆಂಕತ್ತೆ" ಎಂದು ಅವಳ ಕೊರಳಿಗೆ ಹಾಕಿದ. "ಥೂ ನಿನ್ನ" ಎಂದ ವೆಂಕು ಅವನನ್ನು ದೂಡಲುಹೋಗಿ ಆಯ ತಪ್ಪಿ ಅವನ ಮೇಲೆ ಬಿದ್ದಳು. ಶೇಷಪ್ಪ ಕೈಲಿದ್ದ ಬುಡ್ಡಿ ದೀಪ ಕೆಳಗೆ ಬಿದ್ದು ಬತ್ತಕ್ಕೆ ಬೆಂಕಿ ಬಿತ್ತು. ಆದರೆ ಅವರಿಬ್ಬರೂ ಅದನ್ನು ಗಮನಿಸುವ ಪರಿಸ್ಥಿತಿಯಲ್ಲಿರಲಿಲ್ಲ.

ಕೇಶವಾಪುರಕ್ಕೆ ವಕ್ಕರಿಸಿದ ಶನಿ:

ಅಂದು ಮುಂಜಾನೆಯೇ ದ್ಯಾವಲಾಪುರದ ರಾಮೇಗೌಡ ಕಳೆದು ಹೋದ ಹಸುವನ್ನು ಕುರಿತು ಕವಡೆ ಶಾಸ್ತ್ರ ಕೇಳಲು ಶ್ಯಾನುಬೋಗರಾದ ಕೇಶವಾಚಾರ್ಯರ ಹೊಸಲು ತುಳಿದಿದ್ದ. ಎಲೆ ಅಡಿಕೆ ಮೇಲೆ ದಕ್ಷಿಣೆಯಾಗಿ ಒಂದು ಬೆಳ್ಳಿ ನಾಣ್ಯ, ತೆಂಗಿನಕಾಯಿ, ಇತ್ಯಾದಿ ಸಾಮಗ್ರಿಗಳನ್ನು ಕಟ್ಟೆಯ ಮೇಲಿಟ್ಟ. ಕವಡೆ ಪಂಚಾಗದೊಂದಿಗೆ ಹೊರಬಂದ ಕೇಶವಾಚಾರ್ಯರು ಹಸುವಿನ ಚಹರೆಗಳನ್ನು ಕೇಳಿ ಕವಡೆ ಹಾಕಿ, ಸರಿ ಬೆಸಗಳನ್ನು ನೋಡಿ ಲೆಕ್ಕಹಾಕಿ "ರಾಮೇಗೌಡ್ರೇ ನಿಮ್ಮ ಹಸು ಪಡುವಣ ದಿಕ್ಕಿನ ಎರಡು ಗಾವುದ ದೂರದಲ್ಲಿದೆ, ಏನೂ ಯೋಚನೆ ಮಾಡಬೇಡಿ, ದೊರೆಯುತ್ತದೆ" ಎನ್ನುತ್ತಿರುವ ಸಂದರ್ಭದಲ್ಲೇ ತಲೆಬಾಗಿಲ ಹತ್ತಿರ 'ಭವತೀ ಬಿಕ್ಷಾಂದೇಹಿ' ಎಂದು ಕೇಳಿಸಿತು.

"ಲೇ ಇವಳೇ ಯಾರೋ ಬಿಕ್ಷುಕರು ಬಂದಿದ್ದಾರೆ ಬಿಕ್ಷೆ ಹಾಕೇ" ಎಂದು ಕೇಶವಾಚಾರ್ಯರು ಮನೆಯೊಳಗೆ ತಿರುಗಿ ಹೇಳಿದರು. ಬಿಕ್ಷೆಗಾಗಿ ಬಂದ ವ್ಯಕ್ತಿ ನೇರ ಕಟ್ಟೆಯ ಹತ್ತಿರವೇ ಬಂದ. ಸುರದ್ರೂಪಿ ಆಜಾನುಭಾಹುವಾದ ಅವನ ಕಣ್ಣಲ್ಲಿ ವಿಚಿತ್ರವಾದ ತೇಜಸ್ಸಿತ್ತು "ನಾವು ಬಿಕ್ಷುಕರಲ್ಲ, ನಿಮ್ಮ ಬಿಕ್ಷೆಗೆ ದಿಕ್ಕಾರ, ನೀವು ಶಾಸ್ತ್ರ ಹೇಳಿದ ಹಾಗೆ ಕಳೆದು ಹೋದ ರಾಮೇಗೌಡರ ಹಸು ಪಡುವಣ ದಿಕ್ಕಿನ ಬದಲಾಗಿ, ಚೆನ್ನಕೇಶವನ ಬೆಟ್ಟದ ಹಿಂಭಾಗದ ದಿಕ್ಕಿನ ನರಸಾಪುರದ ಕಾಡಿನಲ್ಲಿ ಹುಲಿಗೆ ಆಹುತಿಯಾಗಿದೆ". ಅವನ ಮಾತುಗಳು ಮರ್ಮಕ್ಕೆ ತಾಗಿದಂತಾಗಿ ಅವಮಾನಗೊಂಡ ಕೇಶವಾಚಾರ್ಯರು "ಅದಕ್ಕೆ ಪ್ರಮಾಣವೇನು?" ಎಂದು ಪ್ರಶ್ನಿಸಿದರು. ಜೋಳಿಗೆಯಿಂದ ಡಬ್ಬಿಯನ್ನು ತೆಗೆದ ಆಗಂತುಕ ಅದರಲ್ಲಿದ್ದ ಅಂಜನವನ್ನು ಕಟ್ಟೆಯಮೇಲಿದ್ದ ವೀಳೆದೆಲೆಗೆ ಸವರಿ, 'ನೋಡಿ' ಎಂದ. ಅಂಜನದಲ್ಲಿ ನರಸಾಪುರದ ಕಾಡಿನಲ್ಲಿ ದ್ಯಾವಲಾಪುರದ ರಾಮೇಗೌಡರ ಹಸುವಿನ ಕುತ್ತಿಗೆಯನ್ನು ಹಿಡಿದಿದ್ದ ಹುಲಿ ಅತ್ತಿತ್ತ ಎಳೆದಾಡುತ್ತಿತ್ತು. ಅಷ್ಟರಲ್ಲಿ ವೆಂಕೂಬಾಯಿ ಮೊರದ ತುಂಬಾ ಅಕ್ಕಿಯನ್ನು ತುಂಬಿಕೊಂಡು ಬಿಕ್ಷೆನೀಡಲು ನಡುಮನೆ ದಾಟಿ ಹೊರಬಂದು, ಆಗಂತುಕನನ್ನು ಕಂಡು ಅವಾಕ್ಕಾಗಿ "ನೀನು ಶೇಷಣ್ಣ ಅಲ್ಲವೇ?" ಅಂದರು. ಆಗಂತುಕ "ಅರೆ...ನೀನು ವೆಂಕತ್ತೆ ಇಲ್ಲಿ...!" ಶೇಷಣ್ಣ ವೆಂಕೂಬಾಯಿಯ ತೌರುಮನೆಯ ದೂರದ ನೆಂಟ, ವರಸೆಯಲ್ಲಿ ಅಳಿಯನಾಗುತ್ತಾನೆ. ಅವನು ಚಿಕ್ಕವನಿದ್ದಾಗಲೇ ಮನೆ ಬಿಟ್ಟು ಸಾಧುಗಳ ಜೊತೆಸೇರಿ ದೇಶಾಂತರ ಹೋಗಿರುತ್ತಾನೆ.

"ಶೇಷಣ್ಣ ನೀನು ವೆಂಕುವಿಗೆ ದೂರದ ಸಂಬಂಧಿಯಾದರೆ, ನನಗೂ ನೆಂಟ ಆದ ಹಾಗಾಯಿತು, ನಮಗೆ ದೇವರು ಸಾಕಷ್ಟು ಕರುಣಿಸಿದ್ದಾನೆ..ನೀನು ಇಲ್ಲಿಯೇ ಇದ್ದು ಹೊಲ, ಗದ್ದೆಗಳ ಪಾರುಪತ್ತೆಯನ್ನು ನೋಡಿಕೊಳ್ಳಬಹುದಲ್ಲ" ಎಂದ ಕೇಶವಾಚಾರ್ಯರ ಮಾತುಗಳಿಗೆ ವೆಂಕತ್ತೆಯೂ ಧ್ವನಿಗೂಡಿಸಿದಾಗ, ಜುಲುಮೆಯಿಂದಲೇ ಶೇಷಣ್ಣ ಒಪ್ಪಿಕೊಳ್ಳುತ್ತಾನೆ. ಅಲ್ಲಿಗೆ ಶ್ಯಾನುಭೋಗ ಕೇಶವಾಚಾರ್ಯರ ಮನೆತನದ ದುರಂತ ಪ್ರಾರಂಭವಾಗುತ್ತದೆ.


ನನ್ನನ್ನು ಕರೆದುಕೋ:

ಹೋದ ವರ್ಷದ ಮಳೆಗಾಲದಲ್ಲಿ ಶ್ಯಾನುಭೋಗ ಕೇಶವಾಚಾರ್ಯರ ತಾತನ ಕಾಲದ ಹಳೆಯ ತೊಟ್ಟಿ ಮನೆಯ ಮೂಡಲ ಭಾಗದ ತೇಗದ ಭಾರೀ ತೊಲೆ ಮುರಿದು ಬಿದ್ದಿದ್ದರಿಂದ, ಅದರ ಪಕ್ಕದಲ್ಲೇ ಮಹಡಿ ಮನೆಯನ್ನು ಕಟ್ಟಲಾಯಿತು. ಸುತ್ತೂ ಏಳು ಹಳ್ಳಿಗಳ ಶ್ಯಾನುಬೋಗಿಕೆ ಕೇಶವಾಚಾರ್ಯರಿಗೇ ಸೇರುತ್ತದಾದುದರಿಂದ, ಗೃಹ ಪ್ರವೇಶವನ್ನು ಅತ್ಯಂತ ಅದ್ಧೂರಿಯಾಗಿ ಮಾಡಬೇಕೆಂದು ಶೇಷಣ್ಣ ಸೂಚಿಸಲು, ಹಣದ ಅಡಚಣಿ ಕುರಿತು ಕೇಶವಾಚಾರಿ ಕೈಚೆಲ್ಲುತ್ತಾರೆ. "ಕೇಶವಮಾವ ಎಂಥಾ ಮನೆತನ ನಿಮ್ಮದು..ಸರಳವಾಗಿ ಗೃಹ ಪ್ರವೇಶ ಮಾಡಿದರೆ ಸರೀಕರು ಆಡಿಕೊಳ್ಳಲ್ಲವೇ..?ನಿಮ್ಮ ತಾತನವರಾದ ವೇದಾಂತಾಚಾರ್ಯರ ಹೆಸರು ಈ ಸೀಮೆಲೇ ಹೆಸರುವಾಸಿ ಅವರು ಪಂಚಾಗ ಹಿಡಿದು ಕುದುರೆ ಸಾರೋಟು ಹತ್ತಿ ರಸ್ತೆಗೆ ಬಂದರೆ ಅಮಲ್ದಾರ..ಸಿರಸ್ಥೇದಾರಯಾಗಿ ಎಲ್ಲರೂ ನಡುಬಗ್ಗಿಸಿ ಸಲಾಮು ಮಾಡುತ್ತಿದ್ದರಂತೆ. ಒಮ್ಮೆ ಮೈಸೂರು ಸೀಮೆಗೆ ಹೋದಾಗ, ಮೈಸೂರು ಮಾರಾಜರೇ ಸಿಂಹಾಸನದಿಂದ ಇಳಿದುಬಂದು ಅವರ ಕೈಗೆ ಬಂಗಾರದ ಕಡಗ ತೊಡೆಸಿ ಬರಮಾಡಿಕೊಂಡಿದ್ದರಂತೆ, ಅಂಥಹ ವಂಶಸ್ಥರಾದ ನೀವು ಹೀಗೆಂದರೆ ಹೇಗೆ? ಈ ಶೇಷಣ್ಣ ಇರೋವರೆಗೂ ನೀವು ಯಾವುದಕ್ಕೂ ಚಿಂತೆ ಮಾಡಬೇಡಿ..ಗೋವಿಂದ ಶೆಟ್ರಹತ್ತಿರ ಮಾತಾಡಿದ್ದೇನೆ ಕೆರೆಕೆಳಗಿನ ಎರಡು ಎಕರೆ ಗದ್ದೆ ಮಾರಿದರಾಯಿತು" ಎಂದು ಸಮಾಧಾನ ಮಾಡಿದ. 'ಮುಂಡೇ ಗಂಡ ಈ ಶೇಷಣ್ಣ ಶ್ಯಾನುಭೋಗದ ಮನೆ ಗುಡಿಸಿ ಗುಂಡಾಂತರ ಮಾಡ್ತಾನೆ' ಎಂದು ಅಗ್ರಹಾರದ ಉಳಿದ ಬ್ರಾಹ್ಮಣ ಕುಟುಂಬಗಳು ಆಡಿಕೊಂಡರೂ, ಶೇಷಣ್ಣ ಯಾರಿಗೂ ಕ್ಯಾರೇ ಎನ್ನಲಿಲ್ಲ.

ಸುತ್ತೂ ಏಳು ಊರುಗಳಿಗೆ ಆಸಾದಿಗಳು ಡಡ್ ಡಣಕ..ಡಕ್ ಡಣಕ ಎಂದು ತಮಟೆ ಬಾರಿಸುತ್ತಾ 'ಕೇಳ್ರಪ್ಪೋ ಕೇಳ್ರಿ ಶ್ಯಾನುಬೋಗರ ಹೊಸಮನೆ ಊಟ ಐತೆ ಮೂರು ದಿನ ಯಾರೂ ಒಲೆ ಅಚ್ಚಾಂಗಿಲ್ಲ..ಸಮಸ್ತರೂ ಬರ್ಬೇಕ ಹೋ...' ಡಡ್‌ಡಣಕ..ಡಡ್‌ಡಣಕ. ಎಂದು ಸಾರಿದರು. ಮೇಲ್‌ ಸ್ಥರದ ಜನರ ಪ್ರತಿ ಮನೆಗೂ ತಳವಾರರು ಹೋಗಿ, ವಿಷಯ ಮುಟ್ಟಿಸಿಬಂದರು. ಮೇಲುಕೋಟೆಯಿಂದ ಪುರೋಹಿತರನ್ನು ಕರೆಸಲಾಯಿತು. ಭೂರಿ ಭೋಜನದ ತಯಾರಿಕೆಗೆ ತಮಿಳು ಸೀಮೆಯಿಂದ ಅಡಿಗೆಯವರನ್ನು ಕರೆಸಲಾಯಿತು. ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅತ್ಯಂತ ಅದ್ಧೂರಿಯಾಗಿ ಮೂರು ದಿನ ಗೃಹ ಪ್ರವೇಶ ನಡೆಯಿತು. ಗೃಹಪ್ರವೇಶದಲ್ಲಿ ಉಂಡ ಸುತ್ತೇಳೂ ಹಳ್ಳಿಗಳ ಜನ 'ಓಹೋ' ಎಂದು ಮೂಗಿಮೇಲೆ ಬೆರಳಿಟ್ಟು ಬೆರಗಾದರು. ಗೃಹಪ್ರವೇಶದ ಸಕಲ ಪಾರುಪತ್ತೆಯನ್ನು ಸ್ವತ: ಶೇಷಣ್ಣನೇ ನೋಡಿಕೊಂಡ.

ಭೂದಾನ, ಗೋದಾನ, ಕನಕದಾನ, ಬ್ರಾಹ್ಮಣರಿಗೆ ದಕ್ಷಿಣೆ, ಗೃಹ ಪ್ರವೇಶದ ಹೋಮ ಹಮನಾದಿ ಇತ್ಯಾದಿ ಪೂಜಾದಿಗಳಿಗೆ, ಹಾಗೂ ಭೋಜನದ ಬಾಬತ್ತುಗಳಿಗಾಗಿ ಹಣಸಾಕಾಗಲಿಲ್ಲವೆಂದು, ಶ್ಯಾನುಭೋಗ ಕೇಶವಾಚಾರ್ಯರಿಗೆ ಇದ್ದ ಒಂದೂವರೆ ಎಕರೆ ಬಾಳೆ ತೋಟವನ್ನು ಶೇಷಣ್ಣ ಕೆಳಗಿನ ಓಣಿಯ ನಿಂಗೇಗೌಡನ ಪಾಲುಮಾಡಿದ. 'ಬ್ರಾಂಬರ ಸೊತ್ತು ನಾವು ಅರಗಿಸಿಕೊಳ್ಳೊಕಾಗಾಕಿಲ್ಲ ಬುದ್ದೀ' ಎಂದು ಕೆಳಗಿನ ಓಣಿಯ ನಿಂಗೇಗೌಡ ಕುಯ್ಯೋ.. ಮುರ್ರೋ ಎಂದರೂ, ಶೇಷಣ್ಣ ಅವನನ್ನು ಯಾವ ಮಾಯದಲ್ಲಿ ಒಪ್ಪಿಸಿದನೋ ದೇವರೇ ಬಲ್ಲ.

ಗಣ ಹೋಮದ ನಂತರ ಮೂರು ದಿನ ದಂಪತಿಗಳು ಹೊಸ ಮನೆಯಲ್ಲೇ ನಿದ್ರಿಸಬೇಕೆಂಬ ಪುರೋಹಿತರ ಮಾತಿನಂತೆ ಶ್ಯಾನುಬೋಗ ಕೇಶವಾಚಾರ್ಯ ಮತ್ತು ವೆಂಕು ಹೊಸ ಮನೆಯಲ್ಲೇ ಉಳಿದರು. ಕೇಶವಾಚಾರ್ಯರಿಗೆ ಮಂಕು ಕವಿದಂತಾಗಿತ್ತು. ಇದ್ದ ಬದ್ದ ಆಸ್ತಿ ಎಲ್ಲಾ ಹೊಸ ಮನೆಯ ಹೆಸರಿನಲ್ಲಿ ಪರರ ಪಾಲಾಯಿತು. ಮನೆಯಲ್ಲಿ ಚಿಕ್ಕಾಸೂ ಉಳಿಯಲಿಲ್ಲ. ದೊಡ್ಡಸ್ಥಿಕೆಗೆ ಹೋಗಿ ನಗೆಪಾಟಲಿಗೆ ಈಡಾದನಲ್ಲಾ. ಉಪಜೀವನಕ್ಕೆ ಏನುಮಾಡಬೇಕು ಎಂಬ ಯೋಚನೆಯಲ್ಲಿ ಎಷ್ಟು ಹೊರಳಾಡಿದರೂ ನಿದ್ರೆ ಹತ್ತಲೇ ಇಲ್ಲ.

ಸರಿ ರಾತ್ರಿಯಲ್ಲಿ, ಕಣ್ಣು ಎಳಿಯೋ ಹೊತ್ತಿನಲ್ಲಿ, ಯಾರೋ ಕರೆದಂತಾಯಿತು. ಎದ್ದು ನೋಡಿದರೆ ಯಾರೂ ಇಲ್ಲ. ನೀರವ ನಿಶಬ್ಧ..ವೆಂಕುವಿನ ಉಸಿರಾಟದ ಹೊರತಾಗಿ ಉಳಿದೆಲ್ಲವೂ ಮೌನ, ಹುಣಸೇತೋಪಿನಾಚೆಯ ಸ್ಮಶಾನದಿಂದ ನರಿಗಳ ಗುಂಪೊಂದು ಕೆಟ್ಟದಾಗಿ ಊಳಿಡುತ್ತಿದ್ದವು. 'ಅಪಶಕುನ..ಅಪಶಕುನ' ಎಂದುಕೊಂಡ ಕೇಶವಾಚಾರ್ಯ 'ಶ್ರೀಆಂಜನೇಯಂ ಪ್ರಸನ್ನಾಂಜನೇಯಂ..;' ಎಂದು ಹನುಮಶ್ರೋಸ್ತ್ರವನ್ನು ಜಪಿಸುತ್ತಾ ಬಚ್ಚಲು ಮನೆಗೆ ಹೋಗಿ ಬಂದು, ಪುನ: ಮಲಗಲು ಉಪಕ್ರಮಿಸಿದರು. ಇನ್ನೇನು ಮಲಗಬೇಕು ಎನ್ನುವಾಗಲೇ..ಮತ್ತೇ ಯಾರೋ ಕರೆದಂತಾಯಿತು. ಕತ್ತಲೆಯಲ್ಲೇ ಶಬ್ಧಬಂದ ದಿಕ್ಕಿನೆಡೆ ಕಿವಿಯನ್ನು ನಿಮಿರಿಸಿ ಆಲಿಸಲು ಪ್ರಯತ್ನಿಸಿದರು. ಯಾರೋ ಹೆಣ್ಣಿನ ಧ್ವನಿ..'ನನ್ನನ್ನು ಕರೆದುಕೋ' 'ನನ್ನನ್ನು ಕರೆದುಕೋ' ಎಂದು ಅಸ್ಪಷ್ಟವಾಗಿ ಕೇಳುತ್ತಿದೆ. ಶಬ್ಧದ ಮೂಲವನ್ನು ಅರಸುತ್ತಾಹೋದ ಶ್ಯಾನುಭೋಗ ಕೇಶವಾಚಾರ್ಯರಿಗೆ ಅವರ ತಾತನ ಕಾಲದ ಹಳೆಯ ತೊಟ್ಟಿ ಮನೆಯ ಮೂಡಲ ಭಾಗದ ತೇಗದ ಭಾರೀ ತೊಲೆ ಮುರಿದುಬಿದ್ದ ಸ್ಥಳದ ಪಕ್ಕದಲ್ಲಿದ್ದ ದೇವರ ಮನೆಯಿಂದ ಆ ಧ್ವನಿಬರುತ್ತಿತ್ತು. ಕೇಶವಾಚಾರ್ಯರಿಗೆ ಭಯ..ಆಶ್ಚರ್ಯ ಒಮ್ಮೆಲೇ ಆವರಿಸಿದವು. ಗಾಯಿತ್ರಿ ಮಂತ್ರ ಜಪಿಸುತ್ತಾ, ದೇವರ ಮನೆಯ ಕಿರುಬಾಗಿಲನ್ನು ತೆರೆದರು . 'ಕಿರ್ರೋ ' ಎಂದು ಬಾಗಿಲು ಶಬ್ಧಮಾಡುವುದೂ..ದೂರದ ಸ್ಮಶಾನದಿಂದ ನರಿಯೋಂದು ಕೆಟ್ಟದಾಗಿ ಅಳುವ ಧ್ವನಿಯಲ್ಲೂ ಊಳಿಡುವುದೂ..'ನನ್ನನ್ನು ಕರೆದುಕೋ' ಎನ್ನುವ ಹೆಣ್ಣಿನ ಧ್ವನಿ..ಈ ಮೂರೂ ಪ್ರಕ್ರಿಯೆಗಳು ಏಕ ಕಾಲಕ್ಕೆ ನಡೆದು ಕೇಶವಾಚಾರ್ಯರ ಕರ್ಣಪಟಲದ ಮೇಲೆ ಬಿದ್ದು, ಅವರ ಜಂಗಾಬಲವೇ ಅಳಿದಂತಾಯಿತು. ಇಲ್ಲದ ಧೈರ್ಯವನ್ನು ಎದೆಯಲ್ಲಿ ತುಂಬಿಕೊಳ್ಳುತ್ತಾ..ದೇವರ ಮನ ಹೊಕ್ಕರು. ಅಖಂಡವಾಗಿ ಉರಿಯುತ್ತಿದ್ದ ನಂದಾದೀಪದ ಬೆಳಕಿನಲ್ಲಿ ನಗುಮೊಗದ ಚೆನ್ನಕೇಶವನ ಪೀಠದ ಅಡಿಯಿಂದ 'ನನ್ನನ್ನು ಕರೆದುಕೋ' ಎನ್ನುವ ಹೆಣ್ಣಿನ ಧ್ವನಿ ಕೇಳಿಸುತ್ತಿತ್ತು. ದೇವರಿಗೆ ಸಾಷ್ಟಾಂಗ ನಮಸ್ಕರಿಸಿದ ಕೇಶವಾಚಾರ್ಯರು, ಪಂಚ ಲೋಹದ ಚೆನ್ನಕೇಶವನ ವಿಗ್ರಹವನ್ನು ಪೀಠದಿಂದ ಬೇರ್ಪಡಿಸಿ ಪಕ್ಕದಲ್ಲಿಟ್ಟು, ಪೀಠವನ್ನು ಅಲುಗಾಡಿಸಲು ನೋಡಿದರು. ಊಂಹೂಂ ಜಪ್ಪಯ್ಯ ಎಂದರೂ ಒಂದಿನಿತೂ ಪೀಠ ಅಲುಗಾಡಲಿಲ್ಲ 'ನನ್ನನ್ನು ಕರೆದುಕೋ' ಎನ್ನುವ ಹೆಣ್ಣಿನ ಧ್ವನಿಯಂತೂ ಕೇಳಿಸುತ್ತಲೇ ಇತ್ತು.

ಆಗಿದ್ದಾಗಲಿ ಎಂದು ಧೈರ್ಯತಂದುಕೊಂಡು, ಹಾರೆಯನ್ನು ತಂದು..ನಿಧಾನವಾಗಿ ದೇವರ ಪೀಠವನ್ನು ಎಬ್ಬಿಸಿದರು. ಪೀಠದ ಕೆಳಗಿನ ದೃಶ್ಯನೋಡಿ ಕೇಶವಾಚಾರ್ಯ ಒಮ್ಮೆಲೇ ದಿಗ್ಭ್ರಮೆಯಿಂದ ಹೌಹಾರಿ ಬೆಚ್ಚಿಬಿದ್ದರು. ಎರಡು ಚಿಕ್ಕ ಮಡಕೆಯ ತುಂಬಾ ಬಂಗಾರದ ನಾಣ್ಯಗಳಿದ್ದವು! ಒಂದು ನಾಣ್ಯವನ್ನು ತೆಗೆದು ನಂದಾದೀಪದ ಬೆಳಕಿನಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಲಾಗಿ, ಒಂದುಕಡೆ ಸಿಂಹದ ತಲೆಯಿರುವ ಹಸು, ಮತ್ತೊಂದು ಕಡೆ ಗುರಾಣಿಯ ನಡುವೆ ಎರಡು ಕತ್ತಿಗಳಿರುವ ಉಬ್ಬು ಚಿತ್ರಗಳಿದ್ದವು. ಯಾರ ಕಾಲದ ನಾಣ್ಯಗಳೋ!!, ಸಂಭ್ರಮಾಶ್ಚರ್ಯಗಳಿಂದ ಮನಸ್ಸಿನಲ್ಲಿ ಏನು ಬಗೆದರೋ, ಕೇಶವಾಚಾರ್ಯ ಆ ನಾಣ್ಯವನ್ನು ಕಿಸೆಯಲ್ಲಿ ಹಾಕಿಕೊಂಡು ಪೀಠವನ್ನು ಯಥಾಸ್ಥಾನದಲ್ಲಿಟ್ಟು ಅದರ ಮೇಲೆ ಚೆನ್ನೆಕೇಶವ ಸ್ವಾಮಿಯ ವಿಗ್ರಹವಿಟ್ಟು ನಿಧಾನವಾಗಿ ದೇವರ ಬಾಗಿಲನ್ನು ಹಾಕಿದರು. ಇಷ್ಟೆಲ್ಲಾ ನಡೆದರೂ ನಗುಮೊಗದ ಚೆನ್ನಕೇಶವ ಸ್ವಾಮಿ ನಗುತ್ತಲೇ ಇದ್ದ.

ವಾಮಾಚಾರ ಪೂಜೆ:

ಮಹಡಿ ಮನೆಗೆ ಬಂದು ಮಲಗಿದ ಕೇಶವಾಚಾರ್ಯರಿಗೆ ನಿದ್ದೆ ಹತ್ತಿರ ಸುಳಿಯಲಿಲ್ಲ, ತಾನು ಕಂಡ ನಿಧಿ ನಿಜವಾಗಲೂ ಬಂಗಾರದ ನಾಣ್ಯಗಳೇ ಅಥವಾ ಇನ್ನಾವುದಾದರೂ ಲೋಹದ್ದೇ..ನಿಜವಾಗಲೂ ಬಂಗಾರವಾಗಿದ್ದರೆ ಅದನ್ನು ಹೇಗೆ ಜೀರ್ಣಿಸಿಕೊಳ್ಳುವುದು? ಕಿಸೆಯಲ್ಲಿದ್ದ ಬಂಗಾರದ ನಾಣ್ಯ ಮೂಸೆಯಲ್ಲಿ ಕರಗಿದ ಬಂಗಾರದಂತೆ ಶರೀರವನ್ನು ಸುಡತೊಡಗಿತು. ಕಿಸೆಗೆ ಕೈಹಾಕಿ ನೋಡಿದರು. ಬೆಳಗಿನಜಾವದ ಚಳಿಗೆ ಬಂಗಾರದ ನಾಣ್ಯ ತಣ್ಣಗೆ ತಲೆಯನ್ನು ಕೊರೆಯುತ್ತಿತ್ತು. ಇಂಥಹ ವಿಚಾರಗಳಿಗೆಲ್ಲಾ ಸರಿಯಾದ ವ್ಯಕ್ತಿ ಎಂದರೆ ಶೇಷಣ್ಣನೇ ಸರಿ. ಈ ವಯಸ್ಸಿಗೇ ಅವನು ಬಹಳ ಲೌಕಿಕವನ್ನು ಕಂಡಿದ್ದಾನೆ. ಚಿಕ್ಕ ವಯಸ್ಸಿಗೇ ಮನೆಯಿಂದ ಓಡಿ ಹೋಗಿ, ದೇಶಾದ್ಯಂತ ಅಲೆದಿದ್ದಾನೆ. ಗುರುವನ್ನು ಅರಸುತ್ತಾ ಹಿಮಾಲಯದ ತಪ್ಪಲೆಲ್ಲಾ ತಿರುಗಿದ್ದಾನೆ. ಮಹಾನ್ ಸಿದ್ದರಿಂದ ಯೋಗ, ಜ್ಯೋತಿಷ್ಯ ಶಾಸ್ತ್ರ, ರಸವಿದ್ಯೆ, ವಾಮಾಚಾರ, ಭಾನಾಮತಿ, ಅಘೋರಿಗಳ ಸಹವಾಸ ಹೀಗೆ ಅವನು ಕಲಿಯದ ವಿದ್ಯೆಗಳೇ ಇಲ್ಲ ಎಂದು ಖುದ್ದು ಅವನೇ ಹೇಳಿದ್ದಾನೆ. ಹೌದು ಅವನೇ ಸರಿಯಾದ ವ್ಯಕ್ತಿ. ಇದೇ ಯೋಚನೆಯಲ್ಲಿ ನಿದ್ರೆಗೆ ಜಾರಿದ ಕೇಶವಾಚಾರ್ಯರು ಎದ್ದಾಗ ಸೂರ್ಯ ಎರಡು ಮಾರು ಮೇಲೆದಿದ್ದ.

ಸಂಧ್ಯಾವಂದನೆ ಇತ್ಯಾದಿ ಅಹ್ನಿಕಗಳನ್ನು ಮುಗಿಸಿದವರೇ ಶೇಷಣ್ಣನಿಗೆ ಬುಲಾವೆ ಕಳಿಸಿದರು. "ಏನು ಕೇಶವಮಾವ ಬೆಳಿಗ್ಗೇನೆ ಹೇಳಿಕಳಿಸಿದ್ರಿ?" ಎಂದು ದೇಶಾವರಿನಗೆ ನಗುತ್ತಾ ಬಂದ ಶೇಷಣ್ಣನಿಗೆ ಹೇಗೆ ವಿಷಯವನ್ನು ಪ್ರಾರಂಭಿಸಬೇಕು ಎಂದು ಗೊಂದಲವಾಯಿತು. "ಏನೂ ಇಲ್ಲ ಶೇಷು ಯಾಕೋ ಏನೂ ತೋಚುತ್ತಾಇಲ್ಲ, ಸ್ಪಲ್ಪ ದೇವಸ್ಥಾನದ ಹತ್ತಿರ ಅಡ್ಡಾಡಿ ಬರೋಣ" ಎಂದು ಜೋಡುಮೆಟ್ಟಿ ಹೊರಟರು. ಕೇಶವಾಚಾರ್ಯರು ನನ್ನನ್ನು ಶೇಷು ಎಂದು ಕೇಶವಾಚಾರ್ಯ ಸಂಭೋಧಿಸಿದರೆ ಏನೋ ಮಹತ್ತರವಾದ ವಿಷಯವೇ ಸರಿ ಎಂದು ಹಿಂದಿನ ಅನುಭವಗಳಿಂದ ಅರಿತ ಶೇಷಣ್ಣ ಅವರನ್ನು ಹಿಂಭಾಲಿಸಿದ.

ಚೆನ್ನಕೇಶವ ಸ್ವಾಮಿಯ ಉತ್ಸವಮೂರ್ತಿ ಗುಡಿಯ ಪ್ರಾಂಗಣಕ್ಕೆ ಕಾಲಿಟ್ಟ ಕೇಶವಾಚಾರ್ಯ ಮನೆದೇವರಿಗೆ ಭಕ್ತಿಯಿಂದ ನಮಸ್ಕರಿಸಿ. ದೇವಸ್ಥಾನದ ಪಡುವಣ ದಿಕ್ಕಿನಲ್ಲಿದ್ದ ತಪೋವನದ ಅರಳೀಮರದ ಕೆಳಗಿನ ಕಲ್ಲು ಬೆಂಚಿನ ಮೇಲೆ ಕುಳಿತು ಅಕ್ಕ ಪಕ್ಕ ಯಾರೂ ಇಲ್ಲ ಎಂದು ಖಾತ್ರಿ ಮಾಡಿಕೊಂಡು, "ಶೇಷೂ ನಿನ್ನ ಹತ್ತಿರ ಒಂದು ಮುಖ್ಯವಾದ ವಿಷಯ ಚರ್ಚಿಸಬೇಕಿತ್ತು..ತುಂಬಾನೇ ಸೂಕ್ಷ್ಮವಾದ ವಿಷಯ" ಎಂದರು. ಈ ಮಾತನ್ನು ಕೇಳಿದ ಶೇಷಣ್ಣನಿಗೆ ತನ್ನ ಮತ್ತು ವೆಂಕತ್ತೆಯ ಅನೈತಿಕ ಸಂಬಂಧ ಕೇಶವಾಚಾರ್ಯನಿಗೆ ತಿಳಿದು ಹೋಗಿರಬೇಕು ಎಂದು ಒಮ್ಮೆಲೇ ಭಯದಿಂದ ಭೀತನಾಗಿ ಹೃದಯ ಹೆಪ್ಪುಗಟ್ಟಿದಂತಾಗಿ ಬಾಯಿಂದ ಮಾತೇ ಹೊರಡಲಿಲ್ಲ, ಮುಖ ಕಪ್ಪಿಟ್ಟಿತು.

ಎಳೆ ಎಳೆಯಾಗಿ ರಾತ್ರಿನಡೆದ ನಿಧಿಯ ಘಟನಾವಳಿಯನ್ನು ಕೇಶವಾಚಾರ್ಯ ಬಿಡಿಸಿ ಹೇಳಿದ ಮೇಲೆ ನಿಟ್ಟಿಸುರು ಬಿಟ್ಟ ಶೇಷಣ್ಣನ ತಲೆಯಲ್ಲಿ ಮಿಂಚೊಂದು ಮಿಂಚಿ ಮಾಯವಾಯಿತು. "ಎಲ್ಲಿ ಕೇಶವ ಮಾವ ಆ ನಾಣ್ಯವನ್ನು ಇಲ್ಲಿ ಕೊಡಿ" ಎಂದು ಕೂತಿದ್ದ ಕಲ್ಲು ಬೆಂಚಿಗೆ ಒರೆಕಲ್ಲಿನ ಮೇಲೆ ಉಜ್ಜುವಂತೆ ತಿಕ್ಕಿ, ಸೂಕ್ಷ್ಮವಾಗಿ ಪರೀಕ್ಷಿಸಿ. "ಹೌದು ಇದು ಬಂಗಾರವೇ ಸರಿ, ಆದರೆ ಯಾವುದಕ್ಕೂ ನೀವು ದುಡುಕಬಾರದು..ಸಂಜೆ ಅಕ್ಕಸಾಲಿಗರ ಶ್ರೀಪಾದನ ಹತ್ತಿರ ಒಮ್ಮೆ ಪರೀಕ್ಷಿಸಿ, ಮುಂದಿನ ಕ್ರಮದ ಬಗ್ಗೆ ಯೋಚಿಸೋಣ". "ನೋಡು ಶೇಷು ಈ ವಿಚಾರ ನಮ್ಮಿಬ್ಬರ ಹೊರತಾಗಿ ಮೂರನೇ ಪ್ರಾಣಿಗೆ ಗೊತ್ತಾಗಬಾರದು. ಮೊದಲೇ ಕುಂಪಣಿ ಸರ್ಕಾರ ಪೋಲಿಸರಿಗೇನಾದರೂ ಗೊತ್ತಾದರೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗುತ್ತದೆ."

" ಆ ವಿಚಾರ ನನಗೆ ಬಿಡಿ ಕೇಶವಮಾವ, ಆದರೆ ಈ ತಂತು ನೀವಂದುಕೊಂಡಷ್ಟು ಸುಲಭವಾದುದಲ್ಲ. ಹಿಮಾಲಯದಲ್ಲಿದ್ದಾಗ ನಮ್ಮ ಗುರುಗಳಾದ ಅಭಯಂಕರರು ನಿಧಿಗಳನ್ನು ದಕ್ಕಿಸಿಕೊಳ್ಳುವ ವಾಮಾಚಾರವನ್ನು ಶಾಸ್ತ್ರೋಕ್ತವಾಗಿ ಭೋಧಿಸಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿಯಾಯಿತೋ ರಕ್ತ ಕಾರಿ ಸಾಯುತ್ತಾರೆ..ಅಥವಾ ನಿಧಿಯೇ ನಿಷ್ಕ್ರಿಯೆಯಾಗುತ್ತದೆ, ಹೇಗೂ ಮುಂದಿನ ಮಂಗಳವಾರ ಅಮಾವಾಶ್ಯೆ ಪೂಜೆಗೆ ಪ್ರಶಕ್ತವಾದ ದಿನ, ಸೋಮವಾರ ನಾನು ಪೇಟೆಗೆ ಹೋಗಿ ಪೂಜೆಗೆ ಬೇಕಾದ ವಿಶಿಷ್ಟ ವಸ್ತುಗಳನ್ನು ತಂದು ಸ್ಮಶಾನದ ಹತ್ತಿರ ಬಚ್ಚಿಡುತ್ತೇನೆ. ಈ ಪೂಜೆ ಸಮರ್ಪಕವಾಗಿ ನಡೆಯಬೇಕು. ಇಲ್ಲದಿದ್ದರೇ ನಿಧಿ ಪೂಜೆ ನಡೆಸುವ ನನ್ನ ಪ್ರಾಣಕ್ಕೆ ಸಂಚಕಾರ ಬರುವ ಸಾಧ್ಯತೆಗಳಿವೆ" ಎಂದ ಶೇಷಣ್ಣನ ಮಾತುಗಳನ್ನು ಕೇಶವಾಚಾರ್ಯರು ಅಭಿಮಾನದಿಂದ ಕೇಳಿದರು.

ಮಂಗಳವಾರ ಅಮಾವಾಸ್ಯೆಯ ರಾತ್ರಿ ಹನ್ನೆರಡು ಗಂಟೆಗೆ ನಿಧಿ ಹೊರತೆಗೆಯುವ ತಂತುವಿಗೆ ಮುಹೂರ್ತ ನಿಗದಿಯಾಯಿತು. ಅಂದು ಸಂಜೆಯೇ ಪೂಜೆಗೆ ಬೇಕಾದ ವಿಶಿಷ್ಟ ವಸ್ತುಗಳ ಒಂದು ಮೂಟೆಯನ್ನು ಶೇಷಣ್ಣ ಹಿತ್ತಲಲ್ಲಿ ತಂದಿಟ್ಟ. "ಕೇಶವ ಮಾವ ಇನ್ನೂ ಕೆಲವು ವಸ್ತುಗಳು ಬೇಕಾಗಿವೆ, ರಾತ್ರಿ ಬರುತ್ತೇನೆ ಹಿತ್ತಲ ಬಾಗಿಲು ತೆರೆದಿಟ್ಟಿರಿ" ಎಂದು ಕತ್ತಲಲ್ಲಿ ಮಾಯವಾದ.

ಸರಿ ರಾತ್ರಿಯಲ್ಲಿ ಮತ್ತೊಂದು ಚೀಲದ ಸಹಿತ ಬಂದ ಶೇಷಣ್ಣ "ಕೇಶವ ಮಾವ ನಾನು" ಎಂದು ಪಿಸುಗುಟ್ಟಿದ. ಹಿತ್ತಲ ಬಾಗಿಲನ್ನು ತೆಗೆದ ಕೇಶವಾಚಾರ್ಯರಿಗೆ ಮೂಟೆಯಿಂದ ಕೋಳಿಯ ಶಬ್ಧ ಕೇಳಿಸಿತು. "ಇದೇನೋ ಶೇಷು ಅನಿಷ್ಟ" ಎಂದರು. ಕೇಶವಮಾವ ವಾಮಾಚಾರದಲ್ಲಿ ಯಾವುದೂ ನಿಷಿದ್ಧವಲ್ಲ. ತಂತು ಮುಗಿಯುವವರೆಗೆ ನೀವು ಮಾತಾಡಬಾರದು, ಕೇವಲ ನಾನು ಹೇಳಿದ ಕ್ರಿಯೆಗಳನ್ನಷ್ಟೇ ಮಾಡಬೇಕು" ಎಂದ. ಶ್ಯಾನುಬೋಗರ ಅಂಗಳದಲ್ಲಿ ಮಲಗಿದ್ದ ನಾಯಿ ವಿಚಿತ್ರವಾಗಿ ಬೊಗಳಲು ಪ್ರಾರಂಭಿಸಿತು.

ದೇವರ ಮನೆ ಸೇರಿದ ಶೇಷಣ್ಣ "ಕೇಶವ ಮಾನ ಚೆನ್ನಕೇಶವನ ವಿಗ್ರಹವನ್ನು ಪೀಠದಿಂದ ಬೇರ್ಪಡಿಸಿ ಪಕ್ಕದ ಕೋಣಿಯಲ್ಲಿಡಿ" ಎಂದು ಪೂಜಾ ಸಾಮಗ್ರಿಗಳನ್ನು ದೇವರ ಮನೆಯ ಒಂದು ಮೂಲೆಯಲ್ಲಿಟ್ಟ. ಓಂ..ಭ್ರೀಂ..ಕ್ರೀಂ..ಎಂದು ಪ್ರಾರಂಭಿಸಿದ ಶೇಷಣ್ಣ ಪೀಠದ ಸುತ್ತಲೂ ಮಂಡಲವನ್ನು ರಚಿಸಿದ..ನಾಲ್ಕು ನಿಂಬೆ ಹಣ್ಣುಗಳನ್ನು ಕೊಯ್ದು ಅದಕ್ಕೆ ಕುಂಕುಮ ಸವರಿ ಅಷ್ಟದಿಕ್ಕುಗಳಲ್ಲಿಟ್ಟ. ಚೀಲದಿಂದ ಹೊರತೆಗೆದ ಕಪಾಲವನ್ನು ಪೀಠದ ಮಧ್ಯಭಾಗದಲ್ಲಿಟ್ಟು ಸುಟ್ಟ ನವಿಲುಗರಿಯ ಭಸ್ಮವನ್ನು ಕಪಾಲದ ಮೇಲೆ ಚೆಲ್ಲಿ,ಅಸ್ಪಷ್ಟವಾಗಿ ಮಂತ್ರಗಳನ್ನು ಪಠಿಸತೊಡಗಿದ..ಸಂಸ್ಕೃತವೂ ಅಲ್ಲದ, ಪಾಳಿಯೂ ಅಲ್ಲದ..ಕೊಂಚ ಒರಿಯಾ ಭಾಷೆಗೆ ಹತ್ತಿರದಂತಿದ್ದ ಆ ಮಂತ್ರಗಳ ಅರ್ಥವಾಗದ ಕೇಶವಾಚಾರ್ಯರು ಮೋಡಿಗೊಳಗಾದ ಮೂಕ ಪ್ರೇಕ್ಷಕರಾಗಿದ್ದರು. ದೂರದ ಸ್ಮಶಾನದಿಂದ ನರಿಯೊಂದು ಕೆಟ್ಟದಾಗಿ ಅಳುವ ಧ್ವನಿಯಲ್ಲಿ ಊಳಿಡತೊಡಗಿತು. ಮಡಿಕೆಯಲ್ಲಿದ್ದ ಸುರೆಯನ್ನು ಒಂದೇ ಗುಟುಕಿಗೆ ಹೀರಿದ ಶೇಷಣ್ಣ ಖಾಲಿ ಮಡಿಕೆಯನ್ನು ತಲೆಯ ಮೇಲಿಂದ ಹಿಂಭಾಗಕ್ಕೆ ಎಸೆದು ಒಡೆದ.

ಶ್ಯಾನುಭೋಗರ ಹಿತ್ತಲಿನಲ್ಲಿದ್ದ ಹುಣಸೆ ಮರದಿಂದ ಗೂಬೆಯೊಂದು ವಿಚಿತ್ರವಾಗಿ ಕೂಗಿ,ಶೇಷಣ್ಣನಿಗೆ ಏನೋ ಸೂಚನೆ ಕೊಟ್ಟಿತು. ಇದ್ದಕ್ಕಿದ್ದ ಹಾಗೆ ಶೇಷಣ್ಣ ಭಯಂಕರವಾಗಿ ಕಾಣಿಸತೊಡಗಿದ .. ಅವನ ಬಾಯಿಯಿಂದ ನಾಲಿಗೆ ಹಾವಿನಂತೆ ಹೊರಬಂತು..ಕಣ್ಣೆವೆಗಳನ್ನು ಮುಚ್ಚಿದ ಅವನು ಖೇಚರಿ ಸ್ಥಿತಿಯನ್ನು ತಲುಪಿದ.

ಬಲಿಯ ರಕ್ತವನ್ನು ಕಪಾಲದ ಮೇಲೆ ಚೆಲ್ಲಿ..ಮನಸ್ಸಿನಲ್ಲೇ ಮಂತ್ರಗಳನ್ನು ಪಠಿಸತೊಡಗುತ್ತಾ..ಕೇಶವಾಚಾರ್ಯರಿಗೆ "ದೃಷ್ಟಿ ನನ್ನ ಕಣ್ಣುಗಳಲ್ಲೇ ಕೇಂದ್ರೀಕೃತವಾಗಿರಲಿ ಪೂರ್ವದಲ್ಲಿ ಹೊಂಗಿರಣಗಳು ಮೂಡುವ ಮೊದಲೇ ತಂತುವನ್ನು ಪೂರ್ಣಗೊಳಿಸಬೇಕು. ಹೀಗಾಗದಿದ್ದ ಪಕ್ಷದಲ್ಲಿ ರಕ್ತಕಾರಿ ಸಾಯುವುದು ಖಂಡಿತ ಅಥವಾ ನಿಧಿಯೇ ನಿಷ್ಕ್ರಿಯೆಯಾಗುತ್ತದೆ" ಎಂದು ಎಡಗೈ ಹೆಬ್ಬರಳನ್ನು ಅವರ ಹಣೆಯ ಮಧ್ಯಭಾಗದಲ್ಲಿಯೂ ಮತ್ತು ತೋರುಬೆರಳನ್ನು ಅವರ ನೆತ್ತಿಯ ಮೇಲಿಟ್ಟು ಒಮ್ಮೆ ಜೋರಾಗಿ ಒತ್ತಿ..ಅವರ ತಲೆಗೂದಲಿನ ಮೂರು ಎಳೆಗಳನ್ನು ಮತ್ತು ಎಡಗೈ ಉಂಗುಷ್ಟ ಬೆರಳಿನ ಉಗುರನ್ನು ಕತ್ತರಿಸಿ ಭಸ್ಮ ಮಾಡಿ ಕಪಾಲದ ಮೇಲೆ ಚೆಲ್ಲಿದ.

ಪ್ರೇತಗಳನ್ನು ಆಹ್ವಾನಿಸುತ್ತಾ ಮಂತ್ರಗಳನ್ನು ಪಠಿಸುತ್ತಲೇ ಮತ್ತೊಂದು ಮಡಿಕೆಯಲ್ಲಿದ್ದ ನೀಚವಾಸನೆ ಬರುತ್ತಿದ್ದ ದ್ರವವನ್ನು 'ಹೂಂ ಸ್ವೀಕರಿಸಿ' ಎಂದ, ಅಂಟು ಅಂಟಾಗಿದ್ದ ಆ ದ್ರವ ಕುಡಿದ ಕೇಶವಾಚಾರ್ಯರಿಗೆ ಹೊಟ್ಟೆ ತೊಳೆಸಿದಂತಾ ಯಿತು ..ಅಂಗಾಲಿನಿಂದ ನೆತ್ತಿಯವರೆಗೂ ಏನೋ ಸಂಚರಿಸಿದಂತಾಗಿ ಅವರ ಕಣ್ಣುಗುಡ್ಡೆಗಳು ಊರ್ಧ್ವಮುಖವಾಗಿ ಚಲಿಸಿ ಸುಪ್ತಾವಸ್ಥೆ ತಲುಪಿದರು, ಉಳಿದ ತಂತು ಅವರಿಗೆ ಸ್ವಪ್ನಾವಸ್ಥೆಯಲ್ಲಿ ಗೋಚರಿಸತೊಡಗಿತು.

ಶೇಷಣ್ಣ ಖೇಚರೀ ಅವಸ್ಥೆಯಲ್ಲೇ ಚೀಲದಿಂದ ಹೊರತೆಗೆದ ಖಡ್ಗಮೃಗದ ಬೆನ್ನುಮೂಳೆಯನ್ನು ಮಂತ್ರಗಳನ್ನು ಪಠಿಸುತ್ತಾ ಮಂಡಲಕ್ಕೆ ಮೂರು ಸುತ್ತು ಹಾಕಿ..ನಭೋ ದಿಕ್ಕಿಗೆ ಹಿಡಿದು ಪ್ರೇತಾತ್ಮಗಳನ್ನು ಆಹ್ವಾನಿಸತೊಡಗಿದ. ಇದ್ದಕ್ಕಿದ್ದ ಹಾಗೆ ಕೇಶವಾಪುರದ ಮೇಲೆ ಕಾರ್ಮೋಡಗಳು ಆವರಿಸಿದವು. ಸಣ್ಣಗೆ ಪ್ರಾರಂಭವಾದ ಮಳೆ ಹಿಂದೆಂದೂ ಕಂಡರಿಯದ ಭಯಂಕರವಾದ ಮಿಂಚು ಗುಡುಗುಗಳಿಂದ ಧೋ...ಧೋ...ಸುರಿಯಲಾರಂಭಿಸಿತು.

ಹುಣಿಸೇತೋಪಿನಾಚೆಯ ಸ್ಮಶಾನದಿಂದ ಭೂಮಿ ಆಕಾಶ ಒಂದಾಗಿಸಿದ ಬೃಹತ್ ಸುಂಟರಗಾಳಿ ಕೇಶವಾಪುರದ ಸಕಲವನ್ನೂ ತನ್ನೊಳಗೆ ಸೆಳೆದುಕೊಳ್ಳುತ್ತಾ ಶ್ಯಾನುಬೋಗ ಕೇಶವಾಚಾರ್ಯರ ಮನೆಸುತ್ತಾ ಭಯಂಕರವಾಗಿ ಸುತ್ತತೊಡಗಿತು...!!

ಊರಿನ ಎಲ್ಲಾ ನಾಯಿಗಳು ನೆರೆದು ಭಯಂಕರವಾಗಿ ಬೊಗಳತೊಡಗಿದವು. ತಂತು ಅಂತಿಮ ಘಟ್ಟ ತಲುಪಿದಾಗ ಆಕಾಶದಲ್ಲಿ ಕಣ್ಣು ಕೊರೈಸುವ ಮಿಂಚೊಂದು ಮಿಂಚಿತು. ಕ್ಷುಧ್ರ ಉಲ್ಕೆಯೊಂದು ಸಿಡಿಲಾಗಿ ಮಾರ್ಪಟ್ಟು...ಭೂಮಿಯೇ ಇಬ್ಭಾಗವಾದಂತೆ ಭಯಂಕರ ಶಬ್ಧದೊಂದಿಗೆ ಶಾನುಭೋಗರ ಅಂಗಳದಲ್ಲಿದ್ದ ,ತೆಂಗಿನ ಮರಕ್ಕೆ ಬಡಿದು, ಅದರ ಸುಳಿ 'ಧಗ್‌'ಎಂದು ಬೆಂಕಿಗೆ ಭಸ್ಮವಾಯಿತು. ಸ್ಮಶಾನದಿಂದ ನರಿಗಳ ಗುಂಪು ಕೆಟ್ಟದಾಗಿ ಅಳುವ ಧ್ವನಿಯಲ್ಲಿ ಊಳಿಡತೊಡಗಿದವು.

ಎಲ್ಲಾ ಪ್ರಶಸ್ತವಾಗಿ ನಡೆಯಿತು ಎಂದು ವಿಜಯೋತ್ಸಾಹದಿಂದ ಶೇಷಣ್ಣ " ಕೇಶವ ಮಾವ ನಾವು ಗೆದ್ದೆವು..ಪೀಠವನ್ನು ಕದಲಿಸಿ ನಿಧಿಯನ್ನು ಹೊರ ತೆಗೆಯಿರಿ" ಎಂದ. ನಿಧಾನವಾಗಿ ಪೀಠವನ್ನು ತೆಗೆದು ಪೀಠದಿಂದ ಕೆಳಗಿನ ದೃಶ್ಯನೋಡಿ..ಕೇಶವಾಚಾರ್ಯ ಒಮ್ಮೆಲೆ ದಿಗ್ಬ್ರಮೆಯಿಂದ ಹೌಹಾರಿ ಬೆಚ್ಚಿಬಿದ್ದರು..ಎರಡು ಚಿಕ್ಕ ಮಡಕೆಯ ತುಂಬಾ ಬಂಗಾರದ ನಾಣ್ಯಗಳಿದ್ದ ಜಾಗದಲ್ಲಿ ಇಜ್ಜಲು ತುಂಬಿಕೊಂಡಿತ್ತು. "ಎಲ್ಲೋ ಆಘಾತವಾಯಿತು ಕೇಶವ ಮಾವ" ಎಂದ ಶೇಷಣ್ಣನ ಮಾತುಗಳಿಗೆ ಕೇಶವಾಚಾರ್ಯರು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವರ ಬಾಯಿಂದ ಅಸ್ಪಷ್ಟ ಶಬ್ದಗಳು ಹೊರಟವು. ಅವರ ಬಾಯಿಗೆ ಪಾರ್ಶವಾಯು ಬಡಿದು..ನಾಲಿಗೆ ಸೇದಿಹೋಗಿತ್ತು.

ಬೆಳಕು ಹರಿಯುವ ಮುನ್ನವೇ ಅಗ್ರಹಾರದ ತುಂಬೆಲ್ಲಾ ಕೇಶವಾಚಾರ್ಯರಿಗೆ ಲಕ್ವಹೊಡೆದ ಸುದ್ದಿ ಹಬ್ಬಿತ್ತು. ಎಲ್ಲರೂ ವಿಚಾರಿಸಲು ಬಂದರು. ಅವರಿಗೆ ತೋಚಿದ ಹಾಗೆ ಸ್ವಾಂತನ ತೋರಿದರು. ಕೆಳಗಿನ ಓಣಿಯ ನಿಂಗೇಗೌಡನಂತೂ ಗೋಳಾಡುತ್ತಾ "ಸ್ವಾಮೇರಾ ನಿಮ್ಮ ಸೊತ್ತು ನಮಗೆ ಬ್ಯಾಡ್ರೀ..ನಮ್ಮನೆ ಉದ್ದಾರ ಆಗಾಕಿಲ್ಲ" ಎಂದು ಒಂದೂವರೆ ಎಕರೆ ಬಾಳೆ ತೋಟದ ಪತ್ರವನ್ನು ಜಗಲಿ ಮೇಲಿಟ್ಟು ಕೈಮುಗಿದ.

ಎದ್ದು ಕಾಣುತ್ತಿದ್ದ ನ್ಯೂನತೆಯೆಂದರೆ ಕೇಶವಾಚಾರ್ಯರ ಪತ್ನಿ ವೆಂಕೂಬಾಯಿ ಮತ್ತು ಶೇಷಣ್ಣನ ಗೈರುಹಾಜರಿ. ಅವರಿಬ್ಬರೂ ಬಂಗಾರದ ನಾಣ್ಯಗಳ ನಿಧಿಯ ಸಹಿತ ಆಗಲೇ ಕೇಶವಾಪುರವನ್ನು ಬಿಟ್ಟು ಎರಡು ಯೋಜನೆ ದಾರಿಯನ್ನು ಸವೆಸಿದ್ದರು.

0-0-0-0-0-0-0-0-0-0

Sunday, July 30, 2006

ಗುಲಗಂಜಿ

ಗುಲಗಂಜಿ
(ಸಣ್ಣ ಕತೆ)
-ಆಕ್ರಮಣವಾದೀತೆಂದು ಸದಾಭೀತನಾಗಿರುವವನಿಗೆ ಪರಾಭವ ತಪ್ಪಿದ್ದಲ್ಲ.
- ನೆಪೋಲಿಯನ್

“ನೀವು ಎನೇ ಹೇಳ್ರಿ ಸಾಹೇಬ್ರ....ಪೂರ್ವಜನ್ಮದ ಸಂಸ್ಕಾರ ಅಂತ ಏನ ನಾವು ಕರೀತೀವಿ, ಅದ ಇದಕ್ಕೆಲ್ಲಾ ಕಾರಣಾ ಅಂತ ನನಗ ಅನಸ್ತದ ನೋಡ್ರಿ.” ಏನೆಲ್ಲಾ ಮಾತಾಡಿದರೂ ಕೊನೆಗೆ ಮೊದಲಿನ ಸಿದ್ದಾಂತಕ್ಕೆ ಜೋತುಬಿದ್ದರು ನಿವೃತ್ತ ತಾಸೀಲ್ದಾರ ಬಾಳಪ್ಪ ಹಣುಮಂತಪ್ಪ ಪಾಟೀಲ.
“ಅದು ಹಾಂಗ ಆಗೂದಿಲ್ಲೋ ಬಾಳೂ. ಅದಕ್ಕ ನಾ ಹೇಳೋದು ನಮ್ಮ ದೇಶದಲ್ಲಿ ‘ಸೈಂಟಿಫಿಕ್ ಜೌಟ್ ಲುಕ್’ ಬೆಳೆಸಿಕೋಬೇಕೂ ಅಂತ... ಅದಕ್ಕೆಲ್ಲಾ ಮುಖ್ಯ ಕಾರಣಾ ಅಂದ್ರ environment ಅರ್ಥಾತ್ ಪರಿಸರ. ಈ ಅಪರಾಧ ಮನೋಭಾವನೆ ಉದ್ಭವಿಸುವುದೇ ನಾವು ನಿಂತ ಪರಿಸರದಿಂದ. ನೆಲೆಗಟ್ಟುಟೊಳ್ಳಾದಾಗ ಕುಸಿತ ಅನಿವಾರ್ಯ” ಏದುಸಿರು ಬಿಡುತ್ತಾ ವಾದಿಸಿದರು ಡಾ.ಮೋಹನರಾವ್ ರಾಜಾರಾವ್ ಇನಾಂದಾರ್.

ಬಿ.ಹೆಚ್.ಪಾಟೀಲ ಮತ್ತು ಡಾ.ಎಂ.ಆರ್.ಇನಾಂದಾರ್ ಬಾಲ್ಯಸ್ನೇಹಿತರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಯಲದಲ್ಲಿ ಅಪರಾಧ ಪರಿಶೋಧನಾ ವಿಜ್ಞಾನಿಯಾಗಿದ್ದು, ಇತ್ತೀಚೆಗೆ ತಾನೇ ನಿವೃತ್ತಿ ಹೊಂದಿ ತವರೂರಾದ ಧಾರವಾಡದಲ್ಲಿ ನೆಲೆಸಿರುವ ಡಾ.ಇನಾಂದಾರ್‌ರಿಗೆ ಅವರದೇ ಆದ ಚರಿಷ್ಮಾ ಇದೆ.
ದಿನಾ ಸಂಜೆ ವಾಯುಸೇವನೆಗೆಂದು ಹೋಗುವ ಸ್ನೇಹಿತರ ಬಾಯಲ್ಲಿ ಅನೇಕ ವಿಷಯಗಳು ಹಿಟ್ಟಾಗಿ ಹೋಗುತ್ತವೆ. ಅಂದಿನ ವಿಷಯ ‘ಭಾರತದಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆ, ದರೋಡೆ, ಅತ್ಯಾಚಾರಗಳಿಗೆ ಕಾರಣಗಳು’. ಡಾ.ಇನಾಂದಾರರ ಪರಿಧಿಯಲ್ಲಿ ಬರುವ ವಿಷಯವಾದ್ದರಿಂದ ಅವರು ತುಂಬಾ ಹುರುಪಿನಿಂದ ತಮ್ಮ ಕೈಕೋಲು ನೆಲಕ್ಕೂರುವುದನ್ನೂ ಮರೆತು ಮಾತಾಡುತ್ತಿದ್ದಾರೆ.

“ ಮತ್ತ ಗೀತಾದೊಳಗ ಕರ್ಮಣ್ಯೇವಾಧಿಕಾ...”
“ ಸ್ಟಾಪ್ ಬಾಳೂ. ನಾನೊಂದಿಷ್ಟು ಪುಸ್ತಕಾ ಕೊಡ್ತೇನಿ ಮೊದಲು ಅವನ್ನ ಓದು” ಎಂದ ಡಾ.ಇನಾಂದಾರ್ ತಮ್ಮ ಭವ್ಯ ಬಂಗಲೆಯ ಮುಂದೆ ನಿಂತು ಕೊಂಚ ಎಡಕ್ಕೆ ಭುಜ ಕುಣಿಸಿ “ಸೊ ಲಾಂಗ್” ಎಂದು ಕಬ್ಬಿಣದ ಗೇಟ್ ತೆರೆದು ಒಳಹೊಕ್ಕರು. ಗ್ರೀನ್ ಲಾನ್‌ನಲ್ಲಿ ಮೊಂಡು ಬಾಲದ ಬಿಳಿ ಡಾಬರ್‌ಮ್ಯಾನ್ ಅವರನ್ನು ಸ್ವಾಗತಿಸಿ, ಯಜಮಾನನ ಆಗಮನವನ್ನು ‘ಬೌ’ ಎಂದು ಅಡಿಗೆಯಾಳಿಗೆ ಸೂಚನೆ ಕೊಟ್ಟಿತು.
ಗ್ರೀನ್ ಲಾನ್‌ನಲ್ಲಿನ ಬೆತ್ತದ ಕುರ್ಚಿಯಲ್ಲಿ ‘ಹುಷ್’ ಎಂದು ಕುಳಿತು ಕೈಯಲ್ಲಿ ಕೋಲನ್ನು ಟೀಪಾಯ್‌ಗಾನಿಸಿ ಆಗಸದಲ್ಲಿ ಮಿಣಿಕ್ ಮಿಣಿಕ್ ಎನ್ನುತ್ತಾ ಒಂದೊಂದೇ ಚುಕ್ಕಿ ಹುಟ್ಟುತ್ತಿದ್ದುದನ್ನು ಗಮನಿಸತೊಡಗುತ್ತಾರೆ ಡಾ.ಇನಾಂದಾರ್.
ಅಷ್ಟು ದೊಡ್ಡ ಆ ಬಂಗಲೆಯಲ್ಲಿ ಜೀವಂತ ಜೀವಿಗಳೆಂದರೆ ಅಡಿಗೆ ಭಟ್ಟ, ಟಾಂ ಅನ್ನೊ ಡಾಬರ್‌ಮ್ಯಾನ್ ನಾಯಿ ಮತ್ತು ಪ್ರಖ್ಯಾತ ಅಪರಾಧ ಪರಿಶೋಧನಾ ವಿಜ್ಞಾನಿ ಡಾ.ಇನಾಂದಾರ್. ಅವರ ಪತ್ನಿ ಸುಶೀಲಾಬಾಯಿ ಒಬ್ಬಳೇ ಮಗಳಾದ ಜೋತ್ಸಾ ಇನಾಂದಾರಳ ಕೊರಗಿನಲ್ಲೇ ಸತ್ತು ನಾಲ್ಕು ವರ್ಷಗಳೇ ಕಳೆದಿವೆ.
ಜೋತ್ಸಾ ಇನಾಂದಾರರ ಏಕಮಾತ್ರ ಪುತ್ರಿ. ಕಾಲೇಜಿನಲ್ಲಿ ಕಲಿಯುತ್ತಿದ್ದಾಗ ಸಹಪಾಠಿ ಮನೋಹರನ ಸಲಿಗೆ ಬೆಳೆಯಿತವಳಿಗೆ, ಪ್ರೀತಿ, ಪ್ರೇಮ, ಕಾಮಗಳ ಸಂಗಮದೊಂದಿಗೆ ಮದುವೆಯ ಮೆಟ್ಟಿಲ ಬಳಿ ಕಾಯುತ್ತ ನಿಂತಿತು ಸ್ನೇಹ. ಕಾರಣ ಮನೋಹರ ಬೇರೆ ಜಾತಿಯವ, ಡಾ.ಇನಾಂದಾರರದೇನೂ ತಕರಾರಿರಲಿಲ್ಲ. ಆದರೆ ಅವರ ಪತ್ನಿ ಸುಶೀಲಾಬಾಯಿ ಬಾಯಿ ಬಾಯಿ ಬಡಕೊಂಡು ರಂಪ ಮಾಡಿದರು. ಜೋತ್ಸಾ ಮತ್ತು ಮನೋಹರರ ಪ್ರೇಮ ಪಕ್ವವಾಗಿ ಮೂರು ತಿಂಗಳ ಹಣ್ಣಾಗಿತ್ತು. ತಾಯಿಯ ಮನಸ್ಸು ನೋಯಿಸಬೇಡವೆಂದು ಡಾ.ಇನಾಂದಾರ್‌ ಹೇಳಿದರೂ ಜೋತ್ಸಾ ಮನೆಬಿಟ್ಟು ಮನೋಹರನ ಜೊತೆ ಹಳಿಯಾಳ ರಸ್ತೆಯಲ್ಲಿದ್ದ ಅವನ ಫಾರಂ ಹೌಸಿನಲ್ಲಿ ಸಂಸಾರ ಹೂಡಿದಳು. ಮುಂದೆ ಈ ಕೊರಗಿನಲ್ಲೇ ಸುಶೀಲಾಬಾಯಿ ಸಾವನ್ನಪ್ಪಿದರು.

ಕಾಲ ಎಲ್ಲವನ್ನೂ ಮರೆಸುತ್ತದೆನ್ನುವ ಅರಿವಿದ್ದ ಡಾ.ಇನಾಂದಾರ್ ಸ್ನೇಹಿತರ ವಶೀಲಿಯಿಂದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಕೆಲಸಕ್ಕೆ ಸೇರಿದರು. ಇತ್ತ ಜೋತ್ಸಾ ಹೆಣ್ಣುಮಗುವಿಗೆ ಜನ್ಮವಿತ್ತು ತಾಯಿಯ ನೆನಪಿಗಾಗಿ ಸುಶೀಲ ಎಂದೇ ನಾಮಕರಣ ಮಾಡಿದಳು.

ಮನೋಹರನಿಗೂ ಬ್ಯಾಂಕಿನಲ್ಲಿ ಕೆಲಸ ಸಿಕ್ಕಿತು.
ಕಾಲಚಕ್ರ ತಿರುಗುತ್ತಲೇ ಇತ್ತು. ನಿವೃತ್ತಿ ಹೊಂದಿದ ಡಾ.ಇನಾಂದಾರ್ ಕ್ಯಾಲಿಫೋರ್ನಿಯಾದಿಂದ ಮರಳಿ ಧಾರವಾಡಕ್ಕೆ ಬಂದು ನೆಲಸಿದರು. ಮೊಮ್ಮಗಳ ಕಣ್ಣು... ನೀಳನಾಸಿಕ ಅವರಿಗೆ ಹೆಂಡತಿಯ ನೆನಪು ತರಿಸುವಂತಿತ್ತು. ಮಾತು ಚೂಟಿತನದಲ್ಲಿ ಜೋತ್ಸಾಳನ್ನು ಮೀರಿಸುತ್ತಿದ್ದಳು ಪುಟ್ಟ ಸುಶೀ.

“ ನನಗ್ಯಾರಿದ್ದಾರೆ? ಈ ಆಸ್ತಿ ಎಲ್ಲಾ ಯಾರಿಗೆ? ಈ ಒಂಟಿ ಜೀವನ ನನಗ ಸಾಕಾಗೇದ. ಇಲ್ಲೇ ಬಂದು ನೆಲಸ್ರಿ” ಎಂದು ಮಗಳನ್ನು ಕೇಳಿದರು ಡಾ.ಇನಾಂದಾರ್, ಆದರೆ ತಾಯಿಯ ಸಾವಿಗೆ ತಾನೇ ಕಾರಣಳೆಂಬ ಪಾಪ ಪ್ರಜ್ಞೆಯಲ್ಲಿ ನರಳುತ್ತಿದ್ದ ಜೋತ್ಸಾ ನಯವಾಗಿ ತಿರಸ್ಕರಿಸಿದಳು.
ಚುಕ್ಕಿಗಳ ಜೊತೆ ನೆನಪಿನಾಗಸದಲ್ಲಿ ವಿಹರಿಸುತ್ತಿದ್ದ ಡಾ.ಇನಾಂದಾರರನ್ನು “ ಸಾಹೇಬ್ರ, ಚಾ” ಎಂದು ವಾಸ್ತವಲೋಕಕ್ಕಿಳಿಸುತ್ತ ಹಬೆ ಏಳುತ್ತಿದ್ದ ಚಹಾದೊಂದಿಗೆ ಅಂದಿನ ಸಂಜೆ ಪತ್ರಿಕೆಯನ್ನು ಟ್ರೇನಲ್ಲಿ ತಂದ ಅಡಿಗೆಯಾಳು ಟೀಪಾಯ್ ಮೇಲಿಟ್ಟ.
ಚಹಾ ಹೀರುತ್ತಾ ಪೇಪರ್ ಕೈಗೆತ್ತಿಕೊಂಡ ಅವರ ಕಣ್ಣಿಗೆ ನಿಂಬೆಹಣ್ಣಿನ ಗಾತ್ರದ ಅಕ್ಷರಗಳ ಹೆಡ್ಡಿಂಗ್ ಹೊತ್ತ ಮೊದಲ ಪುಟದಲ್ಲಿನ ಸುದ್ದಿರಾಚುತ್ತದೆ.
ನಗರದ ಹೊರವಲಯದ ಸಾಧನಕೇರಿ ಬಡಾವಣೆಯ ಒಂಟಿ ಮನೆಯ ಮೇಲೆ ಡಕಾಯಿತನ ದಾಳಿ. ನಗರದ ಖಾಸಗೀ ಕಾರ್ಖಾನೆಯ ನೌಕರನಾದ ಬಸವಂತಪ್ಪ ಈರಪ್ಪ ಉಳ್ಳಾಗಡ್ಡಿ ದಂಪತಿಗಳು ಡಕಾಯಿತರ ಗುಂಡೇಟಿಗೆ ಬಲಿಯಾಗಿದ್ದಾರೆ. ಮನೆಯಲ್ಲಿದ್ದ ಎಲ್ಲಾ ವಸ್ತುಗಳನ್ನು ಲೂಟಿಮಾಡಿ ಶ್ರೀಮತಿ ಉಳ್ಳಾಗಡ್ಡಿಯವರ ಮೇಲೆ ಅತ್ಯಾಚಾರವೆಸಗಿ, ಕೊಂದಿತ್ತಾರೆ. ಈ ಘಟನೆ ಟೌನ್ ಪೋಲೀಸ್ ಠಾಣೆಯ ಇನ್‌ಸ್ಟೆಕ್ಟರ್ ನಾಯಕ ಪರಿಶೋಧನೆ ನಡೆಸುತ್ತಿದ್ದಾರೆ. ವರದಿಯನ್ನು ಓದುತ್ತಿದ್ದ ಹಾಗೇ ಅವರ ಮನಸ್ಸು ಫಾರಂ ಹೌಸಿನ ಒಂಟಿ ಮನೆಯಲ್ಲಿ ವಾಸಿಸುತ್ತಿದ್ದ ಮಗಳ ಕಡೆ ಹೋಯಿತು. ಮಗಳಿಗೆ ಹುಷಾರಾಗಿರಲು ಹೇಳಬೇಕೆಂದು ಯೋಚಿಸಿ ಬಂಗಲೆ ಒಳಗೆ ಹೋಗಿ ಟೆಲಿಪೋನ್ ಡಯಲ್ ಮಾಡಿದರು.

ಅತ್ತಕಡೆ ರಿಸೀವರ್ ಎತ್ತುವ ಸೂಚನೆಗಳೇ ಕಂಡುಬರುತ್ತಿಲ್ಲ. ಜೋತ್ಸಾ ಕೆಲಸದಲ್ಲಿರಬೇಕು ಅಂದುಕೊಂಡರು ಡಾ.ಇನಾಂದಾರ್. ಕೆಲಕ್ಷಣಗಳ ನಂತರ ಸುಶೀ ಫೋನ್ ರಿಸೀವರ್ ಎತ್ತಿದಳು.
“ಹಲೋ ಸುಶೀ ಡಿಯರ್” ಎಂದು ಮಂದಹಾಸದಿಂದ ಮೊಮ್ಮಗಳನ್ನು ಮಾತನಾಡಿಸಿದರು.

“ ಹೊರಗೆ ಮಮ್ಮಿ ಯಾರದೋ ಹತ್ರ ಮಾತಾಡ್ಲಿಕ್ಕೆ ಹತ್ಯಾಳ ಲಗೂ ಕರೀತೀನಿ ಗ್ರಾಂಡ್ ಪ” ತನ್ನ ಮುದ್ದಾದ ಧ್ವನಿಯಲ್ಲಿ ಹೇಳಿದಳು ಸುಶೀ. ನಂತರ ರೀಸಿವರ್ ಪಕ್ಕದಲ್ಲಿಟ್ಟ ಶಬ್ದ.
ಮಗಳು ಬಂದು ಮಾತಾಡುತ್ತಾಳೆಂದು ರಿಸೀವರ್ ಕಿವಿಯ ಹತ್ತಿರವೇ ಇಟ್ಟು ಕಾಯತೊಡಗಿದ ಡಾ.ಇನಾಂದಾರ್‌ಗೆ ಇದ್ದಕ್ಕಿದ್ದ ಹಾಗೆ ರಿಸೀವರ್‌ನಿಂದ ಮತ್ತೊಂದು ಕಂಠ ಕೇಳಿಸಿತು. ಅದು ಅಪರಿಚಿತ ಗಂಡಸಿನ ಕರ್ಕಶ ಧ್ವನಿ....
“ಅಲ್ಲೇ ನಿಂತುಕೋ, ಕೂಗಿದೆ ಅಂದರೆ ನಾನೇನು ಮಾಡತೀನಿ ಅಂತ ಹೇಳ್ಳಿಕ್ಕಾಗೂದಿಲ್ಲಾ.”
ಡಾ.ಇನಾಂದಾರ್‌ “ಊಹಿಸಿದ ಹಾಗೆ ಆಯಿತಲ್ಲ ಇದು,” ಎಂದು ಚಕಿತರಾದರು. ಅಷ್ಟು ವರ್ಷದ ಅಪರಾಧ ಪರಿಶೋಧಕ ಜ್ಞಾನ ಹೆಡೆಬಿಚ್ಚಿ ಕುಣಿಯತೊಡಗಿತು. ಅವರ ಮನಸ್ಸು ಕೆಡುಕಿನ ವಾಸನೆ ಹೀರತೊಡಗಿತು. ಅದೇ ಸಮಯದಲ್ಲಿ ರಿಸೀವರಿಂದ ಮತ್ತೊಂದು ಧ್ವನಿ....!

“ಆ ಹುಡುಗಿ ಚೀರಿಕೊಳ್ಳದ ಹಾಂಗ ನೋಡಿಕೊ... ಏನಾದ್ರೂ ಅತಿ ಶ್ಯಾಣೇತನ ನನ್ನ ಹತ್ತಿರ ತೋರಿಸಿದೆ ಅಂದ್ರ ಇಲ್ಲಿ ನೋಡು, ಈ ರಿವಾಲ್ವರ್ ಈಗಾಗ್ಲೆ ಎರಡು ಕೊಲೆ ಮಾಡೇದ, ಇನ್ನೂ ನಾಲ್ಕು ಗುಂಡು ಬಾಕಿ ಅವ. ಇಬ್ಬರಿಗೇ ನಾಲ್ಕು ಗುಂಡು? ಭಾಳ ಆತು, ಅಲ್ಲ?” ಗಬ್ಬರ್‌ಸಿಂಗ ಶೈಲಿಯ ನಗು.
“ಓ ಗಾಡ್!” ಉದ್ಗಾರತೆಗೆದರು ಡಾ.ಇನಾಂದಾರ್, ರಿಸೀವರ್ ಮೇಲಿದ್ದ ಕೈ ಹಿಡಿತ ಬಿಗಿಯಾಯಿತು, ಕಣ್ಣುಗಳು ಕಿರಿದಾದವು.
ಈಗ ಏನು ಮಾಡಬೇಕು? ಪೋಲೀಸರಿಗೆ ತಿಳಿಸಿದರೆ? ಆದರೆ ಭಾರತದ ಪೋಲೀಸ್ ವ್ಯವಸ್ಥೆ.... ‘ಓ ಷಿಟ್’ ತಕ್ಷಣ ಅವರು ರಕ್ಷಣೆ ನೀಡೋ ಸ್ಥಿತಿಯಲ್ಲಿರುತ್ತಾರೆಯೇ? ಅದೇ ಕ್ಯಾಲಿಫೋರ್ನಿಯಾದಲ್ಲಾಗಿದ್ದರೆ.... ಕ್ಷಣದಲ್ಲಿ ಹಿಡಿಯುತ್ತಿದ್ದರು. ಸಾವು ಬದುಕುಗಳ ನಡುವೆಯೂ ಅಂತಹ ಯೋಚನೆಗಳಿಗೆ ಅವರಿಗೇ ನಾಚಿಕೆ ಎನಿಸುತ್ತಿತ್ತು.

ಊಹೂಂ!ಹೀಗೆ ಯೋಚಿಸುತ್ತಾ ಗಾಬರಿಪಟ್ಟರೆ ಪ್ರಯೋಜನವಿಲ್ಲ. ಈಗ ಮನಸ್ಸಿಗೆ ಬೇಕಾಗಿರುವುದು ಏಕಾಗ್ರತೆ. ಅತ್ತ ಕಡೆ ಅವರು ಏನು ಮಾತಾಡುತ್ತಾರೋ ಹುಷಾರಾಗಿ ಕೇಳಿ ನಂತರ ಏನು ಮಾಡಬೇಕೋ ನಿರ್ಣಯಿಬೇಕು ಎಂದುಕೊಂಡು ಆಲಿಸತೊಡಗಿದರು.
“ನಾವು ಹೇಳಿದ್ಹಂಗ ನಿನ್ನ ಗಂಡನ ಹತ್ರ ಹೋಗಿ ರೊಕ್ಕ ತೊಗೊಂಡು ಬಾ.. ಈ ಹುಡಗಿ ನಮ್ಮ ಹತ್ತಿರಾ ಇರ್ತಾಳ” ಕೇಳಿಬಂತು ಕರ್ಕಶ ಆದೇಶ.
ಈ ಮಾತುಗಳಿಂದ ದುಷ್ಟರ ಪ್ಲಾನೆಲ್ಲಾ ಡಾ.ಇನಾಂದಾರ್‌ಗೆ ಅರ್ಥವಾಗಿ ಹೋಯಿತು. ಅಳಿಯ ಮನೋಹರ್ ಬ್ಯಾಂಕಿನಲ್ಲಿ ಕ್ಯಾಷಿಯರ್, ಜೋತ್ಸಾಳನ್ನು ಬೆದರಿಸಿ ಬ್ಯಾಂಕಿಗೆ ಕಳಿಸಿ ಹಣ ತರಿಸುವ ಯೋಜನೆ! ಅಲ್ಲಿಯವರಿಗೆ ಮೊಮ್ಮಗಳು ಸುಶೀ ಒತ್ತೆಯಾಳು..!
ಅಷ್ಟರಲ್ಲಿ ಹೆಂಗಸಿನ ಮೃದು ಧ್ವನಿ ಕೇಳಿಸಿತು. ರಿಸೀವರನ್ನು ಕಿವಿಯ ಹತ್ತಿರವಿಟ್ಟು ಕೇಳತೊಡಗಿದರು. ಆ ಧ್ವನಿ ಜೋತ್ಸಾಳದೇನಾ? ಅಳು ಧ್ವನಿಯಲ್ಲಿ ಅವಳೇನು ಹೇಳುತ್ತಿದ್ದಾಳೋ ಸರಿಯಾಗಿ ಕೇಳಿಸುತ್ತಿಲ್ಲ. ‘ದಯವಿಟ್ಟು ಮಗಳನ್ನು ಏನೂ ಮಾಡಬೇಡಿ ನಿಮಗೆ ಬೇಕಾಗಿರುವುದು ಹಣ ಅಷ್ಟೇ ತಾನೇ’ ಎಂದು ದೈನ್ಯದಿಂದ ಜೋತ್ಸಾ ಬೇಡುತ್ತಿದ್ದಾಳೆಂದುಕೊಂಡರು ಡಾ.ಇನಾಂದಾರ್.
ಮಗಳ ಪರಿಸ್ಥಿತಿಯಿಂದಾಗಿ ಅವರ ಕಣ್ಣುಗಳು ಮಂಜಾಗತೊಡಗಿದವು. ದು:ಖ ಒತ್ತರಿಸಿ ಬರತೊಡಗಿತು. ಹೇಗಾದರೂ ಮಾಡಿ ಏಕ ಮಾತ್ರ ಕರುಳುಬಳ್ಳಿಯನ್ನು ಅಪಾಯದಿಂದ ಕಾಪಾಡಬೇಕು...
ಅವರ ಮನಸ್ಸು ಮಿಸೈಲ್ ವೇಗದಲ್ಲಿ ಯೋಚಿಸತೊಡಗಿತು. ಹಠಾತ್ತಾಗಿ ಅವರ ನೆನಪಿಗೆ ಬಂದ ವಿಷಯವೆಂದರೆ ಟೆಲಿಪೋನ್! ಪಕ್ಕದಲ್ಲೇ ಇರುವ ಟೆಲಿಪೋನ್‌ನ್ನು ಆ ದುಷ್ಟರು ಗಮನಿಸಿದ ಹಾಗಿಲ್ಲ. ಅದೇ ಟೆಲಿಪೋನ್‌ ಅಪಾಯದಲ್ಲಿರುವ ಮಗಳನ್ನು ರಕ್ಷಿಸುವ ಅವಕಾಶ ಕಲ್ಪಿಸುತ್ತಿರುವ ಏಕಮಾತ್ರ ಕೊಂಡಿ. ಆದರೆ ಡಕಾಯಿತರೇನಾದರೂ ಟೆಲಿಪೋನನ್ನು ಗಮನಿಸಿದರೇ? ಆದರೆ ಹಾಗಾಗುವುದು ಬೇಡವೆಂದು ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿದರು.
ಇನ್ನು ತಡಮಾಡುವುದರಲ್ಲಿ ಅರ್ಥವಿಲ್ಲವೆಂದು ತಿಳಿದು, ಟೆಲಿಪೋನ್‌ ಮೌತ್ ಪೀಸನ್ನು ಬಲವಾಗಿ ಕೈಯಿಂದಾ ಮುಚ್ಚುತ್ತಾ ಅಡಿಗೆಯಾಳನ್ನು ಕೂಗಿದರು. ಅವರ ಧ್ವನಿ ಅವರಿಗೇ ವಿಚಿತ್ರವಾಗಿ ಕೇಳಿಸಿತು. ಓಡಿಬಂದ ಅಡಿಗೆಯಾಳಿಗೆ ಪೆನ್ ಮತ್ತು ಲೆಟರ್‌ಹೆಡ್ ತರಲು ತಿಳಿಸಿದರು.
ಕೇವಲ ಮೂರೇ ಸಾಲಿನಲ್ಲಿ ನಡುಗುವ ಕೈಯಿಂದ, ಟೌನ್ ಪೋಲೀಸ್ ಸ್ಟೇಶನ್ ಇನ್‌ಸ್ಟೆಕ್ಟರ್ ನಾಯಕ್‌ಗೆ ಜೋತ್ಸಾಳ ಫಾರಂ ಹೌಸ್‌ಸುತ್ತಲೂ ಸಾಯುಧ ಪೋಲೀಸರನ್ನು ಸುತ್ತುವರಿಸಲು ವಿನಂತಿ ಬರೆದು ಅಡಿಗೆಯಾಳಿನ ಕೈಗೆ ಕೊಟ್ಟು ಓಡಿಸಿದರು.

ಅಡಿಗೆಯಾಳಿಗೆ ಇದರ ತಲೆ ಬುಡ ಒಂದೂ ಅರ್ಥವಾಗದೆ, ಯಜಮಾನರ ಮುಖ ನೋಡಿ ಕೇಳುವ ಧೈರ್ಯವೂ ಬರದೆ ಆತ ಟೌನ್ ಪೋಲೀಸ್ ಸ್ಟೇಶನ್ ಕಡೆಗೆ ಓಟಕಿತ್ತ.

ಪೊಲೀಸರ ಸುಳಿವು ಡಕಾಯಿತರಿಗೆ ತಿಳಿದರೆ? ಮಗಳು ಮೊಮ್ಮಗಳ ಗತಿ? ಆ ಯೋಚನೆಯೇ ಡಾ.ಇನಾಂದಾರರಿಗೆ ನಡುಕ ಹುಟ್ಟಿಸಿತು. ಅವರ ದವಡೆ ಮಾಂಸ ಖಂಡಗಳು ಬಿಗಿದುಕೊಳ್ಳತೊಡಗಿದವು. ಹೆದರಿಕೆಯಿಂದ ಬೆನ್ನು ಮೂಳೆಯಲ್ಲಿ ಛಳಕು ಪ್ರಾರಂಭವಾಗಿ ನಡುಗತೊಡಗಿದರು.
ಮತ್ತೆ ಟೆಲಿಪೋನಿನಲ್ಲಿ ಧ್ವನಿ ಕೇಳಿಸಿತು, ಏಕಾಗ್ರಚಿತ್ತದಿಂದ ಆಲಿಸತೊಡಗಿದರು.
“ನೀನು ಒಂದು ತಾಸಿನೊಳಗೆ ರೊಕ್ಕದೊಂದಿಗೆ ತಿರುಗಿ ಬರದಿದ್ದರೆ ಎನಾಗ್ತದ ಗೊತ್ತದ ಅಲ್ಲ?”
ಸ್ವಲ್ಪ ಹೊತ್ತು ಮೌನ....
ಇದ್ದಕ್ಕಿದ್ದ ಹಾಗೆ ಅತ್ತಕಡೆ ಟೆಲಿಪೋನ್ ಹತ್ತಿರ ಯಾರೋ ನಡೆದು ಬರುತ್ತಿರುವ ಹೆಜ್ಜೆಯ ಸಪ್ಪಳ...
ಡಾ.ಇನಾಂದಾರರ ಮುಖದ ತುಂಬಾ ಬೆವರಿನ ಹನಿಗಳು ಆವರಿಸಿದವು. ಅವರ ಉಚ್ವಾಸ ನಿಶ್ವಾಸಗಳು ಅವರಿಗೇ ಕೇಳುವಷ್ಟು ಜೋರಾದವು. ಬಿ.ಪಿ. ಸ್ವಲ್ಪ ಸ್ವಲ್ಪವೇ ಏರತೊಡಗಿತು.
“ಓ ಗಾಡ್ ನಾನು ಏನು ನಡೆಯಬಾರದೆಂದು ಬಯಸಿದ್ದೆನೋ ಅದೇ ನಡೆಯಿತು” ಎಂದು ಕಿಸೆಯಲ್ಲಿದ್ದ ‘ಐಸಾರ್ ಡಿಲ್’ ಮಾತ್ರೆಯನ್ನು ನಾಲಿಗೆಯ ಕೆಳಗಿಟ್ಟುಕೊಂಡು ಒಂದು ಕೈಯಿಂದಾ ಎದೆಯ ಭಾಗ ಹಿಡಿದು ಪಕ್ಕದಲ್ಲಿದ್ದ ಕುರ್ಚಿಯಲ್ಲಿ ಕುಸಿಯತೊಡಗಿದರು.
ಟೆಲಿಪೋನ್‌ನಲ್ಲಿ ಎತ್ತರದ ಧ್ವನಿ ಕೇಳಿಸಿತು.....
“ಸಾರಿ ಡ್ಯಾಡಿ, ಹಾಲಿನವಗ ರೊಕ್ಕ ಕೊಟ್ಟು ಬರೋದು ತಡಾ ಆತು”.
ಜೋತ್ಸಾ ಏನು ಹೇಳುತ್ತಿದ್ದಾಳೋ ಡಾ.ಇನಾಂದಾರರಿಗೆ ಅರ್ಥವಾಗಲಿಲ್ಲ.

ಜೋತ್ಸಾಳ ಗಂಟಲು ಜೋರಾಗಿ ಕೂಗುತ್ತಿರುವ ಹಾಗೆ ಕೇಳಿಸಿತು.
“ಸುಶೀ.. ಟಿ.ವಿ. ಆಫ್ ಮಾಡಿ, ಹೋಂವರ್ಕ್ ಮಾಡು”.
“ಡ್ಯಾಡೀ, ಸುಶೀ ಭಾಳ ತುಂಟಿ ಆಗ್ತಿದಾಳೆ ಯಾವಾಗಲೂ ಟಿ.ವಿ. ಹಚಿಗೊಂಡು ನೋಡ್ತಿರ್ತಾಳ, ಅಂದ್ಹಾಂಗ ಏನು ಬೇಕಾಗಿತ್ತು? ಪೋನ್‌ ಮಾಡಿದಿರಿ?” ಎಂದು ಕೇಳಿದ ಜೋತ್ಸಾಳಿಗೆ.
“ಏನೂ ಇಲ್ಲವ್ವಾ, ಸುಮ್ನ ಮಾಡಿದೆ” ಎಂದು ಟೆಲಿಪೋನ್ ಕ್ರೆಡಿಲ್ ಮಾಡಿದರು.
ಡಾ.ಮೋಹನರಾವ್ ರಾಜಾರಾವ್ ಇನಾಂದಾರ ಅಪರಾಧ ಪರಿಶೋಧನ ಶಾಸ್ತ್ರಜ್ಞ ಎಂದು ಮುದ್ರಿಸಿದ್ದ ಲೆಟರ್ ಹೆಡ್ ಟೇಬಲ್ ಮೇಲೆ ಗಾಳಿಗೆ ಸರಿದಾಡುತ್ತಾ ತಮ್ಮನ್ನೇ ಗೇಲಿ ಮಾಡುತ್ತಿದೆಯೇನೋ ಎನಿಸಿತವರಿಗೆ.
0-0-0-0-0-0-0-0-0-0-0-0
ಈ ಕೆಳಗೆ ಪರಾಮರ್ಶನ ದಾಖಲೆಗಳಿವೆ. ನಿಮಗೆ ಬೇಕಾದ ಮಾಹಿತಿಗಾಗಿ ಸೂಕ್ತ ಕೊಂಡಿಯನ್ನು ಕ್ಲಿಕ್ಕಿಸಿ..!!
ಕರ್ನಾಟಕ ರಾಜ್ಯ ಪತ್ರ
ವಿಕಿಪೀಡಿಯಾ ವಿಶ್ವಕೋಶ
ದಾಸ ಸಾಹಿತ್ಯ ನಿಘಂಟು
ಶಬ್ಧಕೋಶ
ಕನ್ನಡ ಪದಕೋಶ
ಅನರ್ಥಕೋಶ
ಕನ್ನಡ-ಕನ್ನಡ-ಇಂಗ್ಲೀಷ್ ನಿಘಂಟು
ಕನ್ನಡ-ಹಿಂದಿ ನಿಘಂಟು
ಇಂಗ್ಲೀಷ್-ಕನ್ನಡ ನಿಘಂಟು(ಕನ್ನಡ ಕಸ್ತೂರಿ.ಕಾಂ)
ಕನ್ನಡ-ಕನ್ನಡ-ಇಂಗ್ಲೀಷ್ ನಿಘಂಟು
ಸಂಸ್ಕೃತ-ಕನ್ನಡ ನಿಘಂಟು
ಇಂಗ್ಲೀಷ್-ಕನ್ನಡ ಲೆಕ್ಕಾಚಾರ ಶಾಶ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಆಡಳಿತಾತ್ಮಕ ಪದಕೋಶ
ಇಂಗ್ಲೀಷ್-ಕನ್ನಡ ಬ್ಯಾಂಕು ಮತ್ತು ವಾಣಿಜ್ಯ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಸಸ್ಯಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ರಸಾಯನಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಗಣಕ ವಿಜ್ಞಾನ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ವಿದ್ಯುನ್ಮಾನ ಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಸಾಹಿತ್ಯ ವಿಮರ್ಶೆ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಗಣಿತ ಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ವೈದ್ಯಕೀಯ ವಿಜ್ಞಾನ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಮನಃಶಾಸ್ತ್ರ ಮತ್ತು ತತ್ವಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಭೌತಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ರಾಜ್ಯಶಾಸ್ತ್ರ ಪಾರಿಭಾಷಿಕ ಪದಕೋಶ
ಇಂಗ್ಲೀಷ್-ಕನ್ನಡ ಪ್ರಾಣಿಶಾಸ್ತ್ರ ಪಾರಿಭಾಷಿಕ ಪದಕೋಶ
ಕನ್ನಡ ಕಾಗುಣಿತ ಪರೀಕ್ಷಕ
ಅವರ್ ಕರ್ನಾಟಕ.ಕಾಂ ಗಾದೆಗಳು
ಸಾಹಿತ್ಯ ಪುಟ ಕನ್ನಡ ಗಾದೆಗಳು
ಒಗಟುಗಳು
ಹಬ್ಬಗಳು(ವಿಕಿಪೀಡಿಯಾ)
ಕನ್ನಡ ರತ್ನ ಹಬ್ಬಗಳು
ವಾರದ ಭವಿಷ್ಯ
ಕನ್ನಡ ಗ್ರಂಥಗಳ ಸೂಚೀಕರಣ ಗ್ರಂಥ/ಲೇಖಕ/ಪ್ರಕಾಶಕ ಸೂಚಿ
ಕ್ಯಾಲೆಂಡರ್
ಕನ್ನಡ ಪಂಚಾಂಗ

####################################################################









THANKS FOR VISITING
YOU ARE VISITOR NO.



screen printingFree Counters
screen printing